ಬಳ್ಳಾರಿ: ತಾಲೂಕಿನ ಹರಗಿನಡೋಣಿ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರು ಪೂರೈಕೆ ಮಾಡುವ ಸಲುವಾಗಿ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಯಡಿ ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಪೂರೈಕೆ ಹಾಗೂ ನೈರ್ಮಲ್ಯ ವಿಭಾಗದಿಂದ ಅಗತ್ಯ ಕ್ರಿಯಾ ಯೋಜನೆಯನ್ನ ತಯಾರಿಸಿ ಜಿಲ್ಲಾಡಳಿಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ ಮಂಜೂರಾಗಿಲ್ಲವೆಂದು ಮತದಾರರು ಮತದಾನ ಬಹಿಷ್ಕರಿಸಿದ್ದರು. ಇದರಿಂದ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಇಕ್ಕಟ್ಟಿನ ಪರಿಸ್ಥಿತಿ ಎದುರಿಸುವಂತಾಗಿತ್ತು. ಆದರೆ ಈಗ ಜಿಲ್ಲಾಡಳಿತ ಸುಮಾರು 25 ಕೋಟಿ ರೂ.ಗಳ ವೆಚ್ಚದಲ್ಲಿ ಶಾಶ್ವತ ಕುಡಿಯುವ ನೀರು ಒದಗಿಸಲು ಮುಂದಾಗಿರುವುದು ಹರಗಿನಡೋಣಿ ಗ್ರಾಮಸ್ಥರಲ್ಲಿ ಸಂತಸ ಉಂಟುಮಾಡಿದೆ.
ಈಗಾಗಲೇ ಹರಗಿನಡೋಣಿ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಪೂರೈಕೆ ಮಾಡಲಾಗುತ್ತಿದೆ. ಗ್ರಾಮದ ಗುಡ್ಡಗಾಡು ಪ್ರದೇಶದಲ್ಲಿ ಎಂಟು ಬೋರ್ವೆಲ್ ಕೊರೆಯಿಸಲಾಗಿದೆ. ಆ ಬೋರ್ವೆಲ್ಗಳ ಪೈಕಿ ಕೇವಲ ಎರಡೇ ಬೋರ್ವೆಲ್ಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳ ಮುಖೇನ ಗ್ರಾಮಕ್ಕೆ ಕುಡಿಯುವ ನೀರನ್ನು ಪೂರೈಸಲಾಗುತ್ತದೆ.
ಆದರೆ ನೀರಿನ ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಹೀಗಾಗಿ, ತುಂಗಭದ್ರಾ ಜಲಾಶಯದ ಉಪ ಕಾಲುವೆಗೆ ಜಾಕ್ ವೆಲ್ ಅಳವಡಿಸಿ, ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆಯೂ ಇದೆ. ಹಾಗಾಗಿ ಉಪ ಕಾಲುವೆ ಮೂಲಕ ಬಂದಂತಹ ನೀರನ್ನು ಒಂದೆಡೆ ಸಂಗ್ರಹಿಸಿಡಲು ಕೆಲವೆಡೆ ಸ್ಥಳ ಗುರುತಿಸಲಾಗಿದೆ. ಆ ಸ್ಥಳವು ಗ್ರಾಮದಿಂದ ದೂರವಿದ್ದ ಕಾರಣ, ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಖಾಲಿ ಇರುವ ಭೂಮಿಯನ್ನು ಖರೀದಿಸುವ ಪ್ರಸ್ತಾವನೆಯೂ ಕೂಡ ಇಲಾಖೆ ಮುಂದಿದೆ ಎಂದು ಗ್ರಾಮೀಣ ಕುಡಿಯುವ ನೀರು ಪೂರೈಕೆ ಹಾಗೂ ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಶಶಿಧರ ಬಿ. ದೇವನಾಳ ತಿಳಿಸಿದ್ದಾರೆ.