ಬಳ್ಳಾರಿ: ಅಕ್ರಮ ಗಣಿಗಾರಿಕೆ, ಗಡಿಗುರುತು ನಾಶಪಡಿಸಿರುವುದು ಸೇರಿದಂತೆ ಇತರೆ ಗಂಭೀರ ಆರೋಪಗಳಲ್ಲಿ ಜೈಲು ಶಿಕ್ಷೆ ಅನುಭವಿಸಿ ಹೊರ ಬಂದಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ತಮ್ಮ ಕುಟುಂಬ ಸಮೇತರಾಗಿ ಪಾಪ ಪರಿಹಾರಕ್ಕಾಗಿ ರಾಮೇಶ್ವರನ ಮೊರೆ ಹೋಗಿದ್ದಾರೆ.
ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಪಂಬನ್ ನಡುಗಡ್ಡೆಯಲ್ಲಿರುವ ರಾಮೇಶ್ವರ ಪುಣ್ಯ ಕ್ಷೇತ್ರಕ್ಕೆ ಜನಾರ್ದನ ರೆಡ್ಡಿ ಕುಟುಂಬ ತೀರ್ಥ ಯಾತ್ರೆ ಕೈಗೊಂಡಿದೆ. ರಾಮೇಶ್ವರಂನ ಪುಣ್ಯ ಕ್ಷೇತ್ರದಲ್ಲಿ ಶಿವಲಿಂಗ ಪ್ರತಿಷ್ಠಾಪಿಸಿರುವ ರೆಡ್ಡಿ ಕುಟುಂಬಸ್ಥರು, ರಾಮೇಶ್ವರನ ದರ್ಶನ ಪಡೆದಿದ್ದಾರೆ.
ಶ್ರೀರಾಮನು ತನ್ನ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ನಿರ್ಧರಿಸಿದ ಸ್ಥಳ ಎಂದು ಪುರಾಣಗಳಲ್ಲಿ ಉಲ್ಲೇಖವಾಗಿರುವ ಈ ಕ್ಷೇತ್ರಕ್ಕೆ ಪಾಪ ಪರಿಹಾರಕ್ಕಾಗಿ ಲಕ್ಷಾಂತರ ಜನರು ಆಗಮಿಸುತ್ತಾರೆ. ಕ್ಷೇತ್ರದ ತೀರ್ಥ ಬಾವಿಗಳ ನೀರಿನಲ್ಲಿ ಸ್ನಾನ ಮಾಡಿದರೆ ಪಾಪ ಪರಿಹಾರವಾಗುತ್ತದೆ ಎಂಬ ಪ್ರತೀತಿಯೂ ಇದೆ. ಇಂತಹ ಪುಣ್ಯ ಕ್ಷೇತ್ರಕ್ಕೆ ನಾನು ಕುಟುಂಬ ಸಮೇತ ಹೋಗಿ ರಾಮನಾಥೇಶ್ವರ ದೇವರ ದರ್ಶನ ಪಡೆದು ಬಂದಿರುವೆ ಎಂದು ಜನಾರ್ದನ ರೆಡ್ಡಿ ತಮ್ಮ ಫೇಸ್ ಬುಕ್ ಪೇಜ್ನಲ್ಲಿ ಬರೆದುಕೊಂಡಿದ್ದಾರೆ.
ಗಣಿ ಅಕ್ರಮ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿದ ಬಳಿಕ ರಾಜಧಾನಿ ಬೆಂಗಳೂರಿನಲ್ಲಿ ನೆಲೆಸಿರುವ ಜನಾರ್ದನ ರೆಡ್ಡಿ ಕುಟುಂಬ, ಬಳ್ಳಾರಿಗೆ ಕಾಲಿಡದೆ ವರ್ಷಗಳೇ ಕಳೆದಿವೆ.