ಬಳ್ಳಾರಿ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ ನಗರ ಕ್ಷೇತ್ರದಿಂದ ಮಾಜಿ ಸಚಿವ ಜನಾರ್ದನ ರೆಡ್ಡಿ ಸ್ಪರ್ಧೆ ಮಾಡಿದ್ರೂ, ನಾನು ಕೂಡ ಇಲ್ಲಿಂದಲೇ ಸ್ಪರ್ಧೆ ಮಾಡುತ್ತೇನೆ. ಯಾವುದೇ ಕಾರಣಕ್ಕೂ ನಾನು ಬಿಜೆಪಿ ಬಿಡುವುದಿಲ್ಲ. ಬಿಜೆಪಿಯಲ್ಲಿಯೇ ಇರುತ್ತೇನೆ, ಇದರಲ್ಲೇ ಮಂದುವರಿಯುತ್ತೇನೆ ಮತ್ತು ಹಿಂದೆ ಸರಿಯುವ ಮಾತು ನನ್ನ ಚರಿತ್ರೆಯಲ್ಲಿಯೇ ಇಲ್ಲ ಎಂದು ಶಾಸಕ ಸೋಮಶೇಖರ ರೆಡ್ಡಿ ತಿಳಿಸಿದರು.
ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಪಕ್ಷ ಸ್ಥಾಪಿಸುತ್ತಿರುವ ವೇಳೆ ನನಗೂ ಕೇಳಿದರು. ನಾನು ಅವರಿಗೆ ಹೊಸ ಪಕ್ಷ ಕಟ್ಟುವುದು ಬೇಡ ಎಂದು ಹೇಳಿದೆ. ಆದರೂ ನನ್ನ ಮಾತು ಅವರು ಕೇಳಲಿಲ್ಲ. ಅವರು ಹೊಸ ಪಕ್ಷ ಸ್ಥಾಪನೆ ಮಾಡಿದ್ದಾರೆ. ರಾಜಕೀಯದಲ್ಲಿ ಇರುವಾಗ ಮನುಷ್ಯ ತಾಳ್ಮೆಯಿಂದ ಇರಬೇಕು. ಜನಾರ್ದನ ರೆಡ್ಡಿ ಹೊಸ ಪಕ್ಷ ಕಟ್ಟಿ ಶೇಕಡಾ ನೂರರಷ್ಟು ತಪ್ಪು ಮಾಡಿದ್ದಾರೆ. ಪಕ್ಷ ಸ್ಥಾಪನೆ ವಿಚಾರದಲ್ಲಿ ಮುನ್ನಡೆ ಮತ್ತು ಹಿನ್ನಡೆಯನ್ನು ಜನರು ನಿರ್ಧಾರ ಮಾಡುತ್ತಾರೆ ಎಂದು ಸೋಮಶೇಖರ್ ರೆಡ್ಡಿ ಹೇಳಿದರು.
ಜನಾರ್ದನ ರೆಡ್ಡಿ ಮನವೊಲಿಸಲು ಈಗಲೂ ಶ್ರೀರಾಮುಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಚುನಾವಣೆಗೂ ಮುನ್ನ ಅವರನ್ನು ಬಿಜೆಪಿಗೆ ಕರೆತರಲು ಸಾಧ್ಯವಿಲ್ಲ. ಈ ಬಗ್ಗೆ ಅವರು ಏನೂ ನಿರ್ಣಯ ತೆಗೆದುಕೊಳ್ಳುತ್ತಿಲ್ಲ. 2013ರಲ್ಲಿ ಜನಾರ್ದನ ರೆಡ್ಡಿ ಸಲುವಾಗಿ ನಾನು ತ್ಯಾಗ ಮಾಡಿದೆ. ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿಲ್ಲ, ಸಹೋದರ ಜೈಲಿನಲ್ಲಿದ್ದ ಕಾರಣ ನಾನು ನ್ಯಾಯಾಲಯಗಳಿಗೆ ಓಡಾಡಬೇಕೆಂದು ಸ್ಪರ್ಧಿಸಿರಲಿಲ್ಲ. ಸ್ಪರ್ಧೆಯಲ್ಲಿ ಗೆದ್ದು, ಕ್ಷೇತ್ರದಲ್ಲಿ ಇಲ್ಲದೆ ಕೋರ್ಟ್ಗೆ ಅಲೆದಾಡುತ್ತಿದ್ದರೆ, ಜನರ ಸೇವೆಗೆ ಅವಕಾಶ ಸಿಗುವುದಿಲ್ಲ. ಹಾಗಾಗಿ ಐದು ವರ್ಷ ಚುನಾವಣೆಯಿಂದ ತಮ್ಮನಿಗಾಗಿಯೇ ದೂರವಿದ್ದೆ. ಆದರೆ ಈ ಬಾರಿ ಬಳ್ಳಾರಿ ನಗರ ಕ್ಷೇತ್ರದಿಂದ ಬಿಜೆಪಿಯಿಂದ ನಾನು ಸ್ಪರ್ಧಿಸುವುದು ನಿಶ್ಚಿತ. ಈ ಕ್ಷೇತ್ರದಲ್ಲಿ ಜನಾರ್ದನ ರೆಡ್ಡಿ ಬಂದು ನಿಂತರೂ ನಾನು ಸ್ಪರ್ಧಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ತಿಂಗಳ ಹಿಂದೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬಿಜೆಪಿ ಪಕ್ಷದ ಜೊತೆಗಿನ ಸಂಬಂಧಕ್ಕೆ ವಿದಾಯ ಹೇಳಿ ಹೊಸ ಪಕ್ಷ ಘೋಷಣೆ ಮಾಡಿದ್ದರು. ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಎನ್ನುವ ಪಕ್ಷವನ್ನು ಸ್ಥಾಪಿಸಿದ್ದಾರೆ. ಅದರ ಜೊತೆಗೆ ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಮುಂದಿನ ಚುನಾವಣೆಗೆ ಸ್ಪರ್ಧಿಸುವುದಾಗಿಯೂ ಘೋಷಿಸಿದ್ದರು. ಪಕ್ಷ ಘೋಷಿಸಿದ್ದ ಜನಾರ್ದನ ರೆಡ್ಡಿ ಅವರು, ತಮ್ಮ ಸಹೋದರನಂತಿರುವ ಸಾರಿಗೆ ಸಚಿವ ಶ್ರೀರಾಮುಲು ಹಾಗೂ ಸಹೋದರರಾದ ಸೋಮಶೇಖರ ರೆಡ್ಡಿ, ಕರುಣಾಕರ ರೆಡ್ಡಿ ಸೇರಿ ಯಾರನ್ನೂ ನನ್ನ ಪಕ್ಷಕ್ಕೆ ಬರುವಂತೆ ಹೇಳುವುದಿಲ್ಲ. ನನ್ನ ಕೆಲಸ ನೋಡಿ, ಭವಿಷ್ಯದಲ್ಲಿ ಸಾಧಿಸುತ್ತೇನೆ ಎಂಬ ನಂಬಿಕೆಯಿಂದ ಬಂದರೆ ಅವರನ್ನು ಸ್ವಾಗತಿಸುತ್ತೇನೆ ಎಂದು ಹೇಳಿದ್ದರು.
ಜನಾರ್ದನ ರೆಡ್ಡಿ ಅವರು ಹೊಸ ಪಕ್ಷ ಘೋಷಿಸಿದ ಬೆನ್ನಲ್ಲೆ ಬಳ್ಳಾರಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಸದಸ್ಯರು ರಾಜೀನಾಮೆ ನೀಡಲು ಪ್ರಾರಂಭಿಸಿದ್ದರು. ಅದರಲ್ಲೂ ಪಕ್ಷದ ಪ್ರಮುಖರು ಬ್ಯಾಕ್ ಟು ಬ್ಯಾಕ್ ರಾಜೀನಾಮೆ ಪತ್ರಗಳನ್ನು ಸಲ್ಲಿಸಿದ್ದರು. ಬೇರೆ ಬೇರೆ ಪಕ್ಷದವರು ಸೇರಿದಂತೆ ಬಿಜೆಪಿ ಪಕ್ಷದ ಪ್ರಮುಖರೇ ಜನಾರ್ದನ ರೆಡ್ಡಿ ಸಮ್ಮುಖದಲ್ಲೇ ಹೊಸ ಪಕ್ಷಕ್ಕೆ ಸೇರಿಕೊಂಡಿದ್ದಾರೆ.
ಇದನ್ನೂ ಓದಿ: 3.5 ಕೋಟಿ ಡೀಲ್ ಮಾಡಿದ್ದು ಕಾಂಗ್ರೆಸ್ನವರು- ಬಿಜೆಪಿಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ: ಸೋಮಶೇಖರ ರೆಡ್ಡಿ