ಬಳ್ಳಾರಿ: ಕಲ್ಯಾಣ ಕರ್ನಾಟಕ ಭಾಗದ ಅವಳಿ ಜಿಲ್ಲೆಗಳ ಹಾಗೂ ನೆರೆಯ ಆಂಧ್ರ ಪ್ರದೇಶ ರಾಜ್ಯದ ಗಡಿ ಗ್ರಾಮಗಳ ಬಡ-ಕೂಲಿ ಕಾರ್ಮಿಕರ ಆರೋಗ್ಯ ಸಂಜೀವಿನಿಯಾಗಿರುವ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಅಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಡಯಾಗ್ನಾಸ್ಟಿಕ್ ಸೆಂಟರ್ ಸೌಲಭ್ಯವಿದ್ದು, ಯಂತ್ರದಲ್ಲಿ ಆಗಾಗ ತಾಂತ್ರಿಕ ದೋಷ ಕಂಡುಬಂದಾಗ ಹೊರಗಡೆ ಚೀಟಿ ಬರೆದುಕೊಡುವ ಪ್ರಸಂಗ ಅನಿವಾರ್ಯವಾಗಿದೆ.
ಹೌದು, ಜಿಲ್ಲೆಯ ಮಟ್ಟಿಗೆ ವಿಮ್ಸ್ ಆಸ್ಪತ್ರೆಯೊಂದೇ ದೊಡ್ಡಮಟ್ಟದ ಸರ್ಕಾರಿ ಆಸ್ಪತ್ರೆಯಾಗಿದೆ. ಈ ಮೊದಲು ಎಂಆರ್ಐ ಸ್ಕ್ಯಾನಿಂಗ್, ಕ್ಷ- ಕಿರಣ, ಅಲ್ಟ್ರಾ ಸೌಂಡ್ ಸೇರಿದಂತೆ ಡಯಾಗ್ನಾಸ್ಟಿಕ್ ಸೇವೆಗಳು ಇರಲಿಲ್ಲ. ಹೀಗಾಗಿ, ಎಲ್ಲಾ ಡಯಾಗ್ನಾಸ್ಟಿಕ್ ವಿವಿಧ ಟೆಸ್ಟಿಂಗ್ಗಾಗಿ ಹೊರಗಡೆ ಇರೋ ಡಯಾಗ್ನಾಸ್ಟಿಕ್ ಸೆಂಟರ್ಗಳ ಮೊರೆ ಹೋಗೋದು ಅನಿವಾರ್ಯವಾಗಿತ್ತು. ವಿಮ್ಸ್ ಆಸ್ಪತ್ರೆ ವೈದ್ಯರು ಡಯಾಗ್ನಾಸ್ಟಿಕ್ಗೆ ಸಂಬಂಧಿಸಿದ ಎಲ್ಲವನ್ನೂ ಕೂಡ ಹೊರಗಡೆ ಬರೆದುಕೊಡೋ ಅಭ್ಯಾಸ ಕರಗತ ಮಾಡಿಕೊಂಡಿದ್ದರು.
ಆದರೀಗ ಅದು ನಿಂತಿದೆ. ಯಾಕಂದ್ರೆ ವಿಮ್ಸ್ ಆಸ್ಪತ್ರೆಯಲ್ಲೇ ಅತ್ಯಾಧುನಿಕ ಡಯಾಗ್ನಾಸ್ಟಿಕ್ ಸೆಂಟರ್ ಸಜ್ಜುಗೊಂಡಿದೆ. ಅದು ಉದ್ಘಾಟನೆಗೊಳ್ಳದಿದ್ದರೂ ಕೂಡ ಆಸ್ಪತ್ರೆಗೆ ಬಂದ ರೋಗಿಗಳ ಸೇವೆಗೆ ಮಾತ್ರ ಎಂದಿಗೂ ಹಿಂದೇಟು ಹಾಕಿಲ್ಲ. ಕೆಲವೊಮ್ಮೆ ತಾಂತ್ರಿಕ ದೋಷ ಉಂಟಾದ್ರೆ ಅನಿವಾರ್ಯವಾಗಿ ಹೊರಗಡೆ ಚೀಟಿ ಬರೆದುಕೊಡೋ ಪರಿಸ್ಥಿತಿ ಬಂದೊದಗುತ್ತೆ. ಅದನ್ನು ಹೊರತುಪಡಿಸಿದರೆ ಉಳಿದೆಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ.
ವಿಮ್ಸ್ ಆಸ್ಪತ್ರೆ ಹೊರತುಪಡಿಸಿದರೆ ಉಳಿದ ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಇಂತಹ ಅತ್ಯಾಧುನಿಕ ಡಯಾಗ್ನಾಸ್ಟಿಕ್ ಸೆಂಟರ್ ಇಲ್ಲ. ವಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ಮಾತ್ರ ಈ ಸೌಲಭ್ಯ ಲಭ್ಯವಾಗಲಿದೆ. ಖಾಸಗಿ ಅಥವಾ ಜಿಲ್ಲಾಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ದಾಖಲಾಗುವ ರೋಗಿಗಳು ಅನಿವಾರ್ಯವಾಗಿ ಹೊರಗಡೆ ಇರೋ ಡಯಾಗ್ನಾಸ್ಟಿಕ್ ಸೆಂಟರ್ಗಳತ್ತ ಮುಖ ಮಾಡಿ ಅಧಿಕ ಹಣ ವ್ಯಯ ಮಾಡಲೇಬೇಕಾದ ಪರಿಸ್ಥಿತಿ ಬಂದೊದಗಿದೆ.
ಕೆಲವೊಮ್ಮೆ ಮಾತ್ರ ವಿಮ್ಸ್ ಆಸ್ಪತ್ರೆಯಲ್ಲಿನ ಅತ್ಯಾಧುನಿಕ ಡಯಾಗ್ನಾಸ್ಟಿಕ್ ಸೆಂಟರ್ಗೆ ಜಿಲ್ಲಾಸ್ಪತ್ರೆ ಸೇರಿ ಇತರೆ ಸಮುದಾಯ ಆರೋಗ್ಯ ಕೇಂದ್ರಗಳ ರೋಗಿಗಳನ್ನು ಕಳುಹಿಸಿಕೊಡಲಾಗುತ್ತೆ.
ಆದರೆ ಈ ಖಾಸಗಿ ಡಯಾಗ್ನಾಸ್ಟಿಕ್ ಸೆಂಟರ್ಗಳು ಪೀಕುವ ದುಬಾರಿ ಶುಲ್ಕದಿಂದ ಮಾತ್ರ ಬಡ - ಕೂಲಿ ಕಾರ್ಮಿಕರನ್ನು ರಕ್ಷಣೆ ಮಾಡಲಿಕ್ಕಾಗಲ್ಲ ಎಂಬುದು ಕಟು ಸತ್ಯ.
ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತನಾಡಿದ ವಿಮ್ಸ್ ನಿರ್ದೇಶಕ ಡಾ. ಟಿ.ಗಂಗಾಧರಗೌಡ, ವಿಮ್ಸ್ ಆಸ್ಪತ್ರೆಯಲ್ಲಿರುವ ಡಯಾಗ್ನಾಸ್ಟಿಕ್ ಸೆಂಟರ್ ದಿನದ 24x7 ಗಂಟೆ ಕಾರ್ಯನಿರ್ವಹಿಸಲಿದೆ. ತುರ್ತು ಚಿಕಿತ್ಸೆ ಪಡೆಯೋ ರೋಗಿಗಳ ಡಯಾಗ್ನಾಸ್ಟಿಕ್ ಟೆಸ್ಟಿಂಗ್ಗೆ ಮೊದಲು ಆದ್ಯತೆ ನೀಡಲಾಗುವುದು. ಕೆಲವೊಮ್ಮೆ ತಾಂತ್ರಿಕ ದೋಷ ಉಂಟಾದಲ್ಲಿ ಖಂಡಿತವಾಗಿಯೂ ಹೊರಗಡೆ ಇರೋ ಡಯಾಗ್ನಾಸ್ಟಿಕ್ ಸೆಂಟರ್ಗೆ ವೈದ್ಯರು ಚೀಟಿ ಬರೆದುಕೊಡೋದು ಅನಿವಾರ್ಯ ಎಂದಿದ್ದಾರೆ.