ಹೊಸಪೇಟೆ: ದರೋಡೆಗೆ ಹೊಂಚು ಹಾಕಿದ್ದ 13 ಜನರ ತಂಡವನ್ನು ಬಂಧಿಸುವಲ್ಲಿ ಹೊಸಪೇಟೆ ಪಟ್ಟಣ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಹಂಪಿ ಡಿವೈಎಸ್ಪಿ ಎಸ್.ಎಸ್. ಕಾಶಿ ಅವರು ಮಾತನಾಡಿ, ಬೆಂಗಳೂರಿನ ಜಮೀರ್ ಪಾಷಾ, ಮೊಹಮ್ಮದ್ ಅಯಸ್ ಖಾನ್, ಸೈಯದ್ ಇಂತಿಯಾಜ್, ಯಾಸೀನ್, ಸೈಯದ್ ಅಮೀನ್, ಜಾವೀದ್, ಸದ್ದಾಂ ಹುಸೇನ್, ಹೊಸಪೇಟೆಯವರಾದ ನಾಲ್ಪಾರ್ ಖಾಸಿಂ, ಇಸ್ಮಾಯಿಲ್, ಮಂಜುನಾಥ, ಸುರೇಶ್, ಬಳ್ಳಾರಿಯವರಾದ ನಾಗೇಶ್, ರಾಘವೇಂದ್ರ ರೆಡ್ಡಿ, ಆಂಧ್ರಪ್ರದೇಶದ ಶೇಖರ ಬಂಧಿಸಿದ್ದು, ಪ್ರಮುಖ ಆರೋಪಿಯಾದ ಹಾಗೂ ಪ್ರಕರಣದ ಕಿಂಗ್ ಪಿನ್ ಬೆಂಗಳೂರಿನ ಸದ್ದಾಂ ಹುಸೇನ್ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಹೇಳಿದರು.
ಆರೋಪಿತರಿಂದ ಇನೋವಾ ಕಾರ್, ಹುಂಡೈ ಕಾರ್, 12 ಮೊಬೈಲ್ ಹಾಗೂ ಶಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ದರೋಡೆ ಮಾಡಲು ಖಾಸಿಂ ತಂಡದವರು ಪಟ್ಟಣದ 4 ಮನೆ ಗುರುತಿಸಿದ್ದಾರೆ. ಫೆ. 23 ರಂದು ಕಿಂಗ್ ಪಿನ್ ಸದ್ದಾಂ ತನ್ನ ತಂಡದವರಿಗೆ ಉಳಿದುಕೊಳ್ಳಲು ಲಾಡ್ಜ್ ಬುಕ್ ಮಾಡಿರುವುದು ವಿಚಾರಣೆಯಿಂದ ತಿಳಿದು ಬಂದಿದೆ ಎಂಬುದಾಗಿ ತಿಳಿಸಿದ್ದಾರೆ. ಇನ್ನು ಆರೋಪಿತರ ಕಾರುಗಳಲ್ಲಿ ಖಾರದ ಪುಡಿ, ಕಬ್ಬಿಣದ ರಾಡ್, ಹಗ್ಗ, ಚಾಕು, ಮನುಷ್ಯರ ಮುಖಕ್ಕೆ ಹಾಕುವ ಪ್ಲಾಸ್ಟಿಕ್ ಪ್ಲಾಸ್ಟರ್ ಸಿಕ್ಕಿರುವುದಾಗಿ ತಿಳಿಸಿದರು.
ದರೋಡೆಕೋರರ ಪತ್ತೆಗಾಗಿ ಐಜಿಪಿ ನಂಜುಂಡಸ್ವಾಮಿ ಹಾಗೂ ಎಸ್ಪಿ ಸೈದುಲು ಅಡಾವತ್ ಅವರ ಮಾರ್ಗದರ್ಶನದಲ್ಲಿ ಎರಡು ತಂಡ ರಚನೆ ಮಾಡಲಾಗಿತ್ತು. ಪಟ್ಟಣ ಠಾಣೆಯ ಪಿಐ ಎಂ. ಶ್ರೀನಿವಾಸ ರಾವ್ ಹಾಗೂ ಪಿಎಸ್ಐ ಬಿ. ಕುಮಾರ ಅವರು ತಂಡದ ನೇತೃತ್ವವಹಿಸಿದ್ದರು. ಪ್ರಕರಣವನ್ನು ಭೇದಿಸಿದ ತಂಡಕ್ಕೆ ಡಿವೈಎಸ್ಪಿ ಅಭಿನಂದನೆ ಸಲ್ಲಿಸಿದರು.