ಬಳ್ಳಾರ : ಹರಪನಹಳ್ಳಿ ತಾಲೂಕಿನ ಲಕ್ಷ್ಮೀಪುರ ತಾಂಡಾದಲ್ಲಿ ನಿನ್ನೆ ನಡೆದ ಹೂವಿನಹಡಗಲಿ ಶಾಸಕ ಪಿ. ಟಿ. ಪರಮೇಶ್ವರ ನಾಯ್ಕ್ ಅವರ ಮಗನ ಮದುವೆಯಲ್ಲಿ ಕೋವಿಡ್-19 ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಶಾಸಕರ ಪುತ್ರ ಹಾಗೂ ಹೋಸ್ಟ್ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ತಿಳಿಸಿದ್ದಾರೆ.
ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಮಾತನಾಡಿದ ಅವರು, ಈಗಾಗಲೇ ಐಪಿಸಿ ಸೆಕ್ಷನ್ 180 ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ (ಡಿಜಾಸ್ಟರ್ ಮ್ಯಾನೇಜ್ಮೆಂಟ್) 2005 ಕಾಯ್ದೆ 18 ರ ಅನ್ವಯ ಪ್ರೈವೇಟ್ ಕಂಪ್ಲೇಂಟ್ ಬುಕ್ ಮಾಡಲಾಗಿದೆ ಎಂದರು.
ಮದುವೆ ನಡೆಸುವ ವಿಚಾರವನ್ನು ಹರಪನಹಳ್ಳಿ ತಾಲೂಕಾಡಳಿತಕ್ಕೆ ಶಾಸಕರ ಪುತ್ರ ತಿಳಿಸಿದ್ದರು. ತಹಸೀಲ್ದಾರ್ ಹಾಗೂ ಹರಪನಹಳ್ಳಿ ಡಿವೈಎಸ್ಪಿ ಕೇವಲ 50 ಮಂದಿ ಸೇರಿ ಮದುವೆ ನಡೆಸುವಂತೆ ಹೇಳಿದ್ದರು. ಆದರೀಗ 50 ಕ್ಕಿಂತ ಅಧಿಕ ಮಂದಿ ಜನ ಸೇರಿರುವ ಮಾಹಿತಿ ನಮಗೆ ತಿಳಿದು ಬಂದಿದೆ, ಹಾಗಾಗಿ ಪರಿಶೀಲನೆ ನಡೆಸಲಾಗುತ್ತೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಎಲ್ಲರೂ ಕೂಡ ಏಳು ದಿನಗಳ ಕ್ವಾರಂಟೈನ್ನಲ್ಲಿ ಇರಬೇಕಾಗುತ್ತೆ. ಅವರು ಕ್ವಾರಂಟೈನ್‘ನಲ್ಲಿರದಿದ್ದರೆ. ಅವರೆಲ್ಲರನ್ನೂ ಕೂಡ ಕ್ವಾರಂಟೈನ್ನಲ್ಲಿರಿಸಲಾಗುವುದು ಎಂದು ತಿಳಿಸಿದರು.