ಬಳ್ಳಾರಿ : ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಹೊಸಪೇಟೆ ನಿವಾಸಿ ಪಿ-336 ಅವರು ಗುಣಮುಖರಾಗಿದ್ದಾರೆ. ಭಾನುವಾರ ಮನೆಗೆ ವಾಪಾಸಾಗಿದ್ದಾರೆ. ಇಂದು ವೈದ್ಯರು ಹೂಗುಚ್ಛ ನೀಡಿ ಜಿಲ್ಲಾಸ್ಪತ್ರೆಯಿಂದ ಗುಣಮುಖರಾದ ವ್ಯಕ್ತಿಯನ್ನು ಕಳುಹಿಸಿಕೊಟ್ಟರು.
ಈವರೆಗೆ ಜಿಲ್ಲೆಯಲ್ಲಿ 13 ಜನರಿಗೆ ಸೋಂಕು ದೃಢಪಟ್ಟಿತ್ತು. ಈ ಹಿಂದೆ ಪಿ-89, ಪಿ-91 ಮತ್ತು ಪಿ-141 ನಂತರ ಪಿ-90 ಹಾಗೂ ಪಿ-151 ಅವರನ್ನು ಬಿಡುಗಡೆ ಮಾಡಲಾಗಿತ್ತು. ಎರಡು ದಿನಗಳ ಹಿಂದೆ 21 ವರ್ಷದ ಪಿ-333 ಹಾಗೂ 24 ವರ್ಷದ ಪಿ- 337 ಅವರನ್ನು ಗುಣಪಡಿಸಿ ಬಿಡುಗಡೆ ಮಾಡಲಾಗಿತ್ತು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎನ್ ಬಸರೆಡ್ಡಿ ಅವರು ಮಾತನಾಡಿ, ಸಾಕಷ್ಟು ಭಯದಲ್ಲಿ ಸೋಂಕಿತರು ದಾಖಲಾಗಿದ್ದರು. ಅವರಿಗೆ ಆಪ್ತ ಸಮಾಲೋಚನೆ ಮಾಡಿ, ಅವರಲ್ಲಿದ್ದ ಭಯ ಹೋಗಲಾಡಿಸಿ ಚಿಕಿತ್ಸೆ ನೀಡಲಾಗಿತ್ತು. ಇವರನ್ನು 14 ದಿನ ಹೋಂ ಕ್ವಾರಂಟೈನ್ ಮತ್ತು 14 ದಿನಗಳ ಕಾಲ ಸೆಲ್ಪ್ ರಿಪೋರ್ಟಿಂಗ್ ಮಾಡಲಾಗುವುದು ಹಾಗೂ ಜಿಲ್ಲಾ ಕಂಟ್ರೋಲ್ ರೂಂ ಮತ್ತು ನಮ್ಮ ತುರ್ತು ರೆಸ್ಪಾನ್ಸ್ ತಂಡದಿಂದ 28 ದಿನಗಳ ಕಾಲ ನಿಗಾವಹಿಸಲಾಗುವುದು ಎಂದು ತಿಳಿಸಿದರು.
ಗುಣಮುಖರಾಗಿ ಹೊರಬಂದ ಪಿ- 336 ಅವರು ತೀವ್ರ ಭಾವುಕರಾದರು. ಆಸ್ಪತ್ರೆಗೆ ದಾಖಲಾದಾಗಿನಿಂದ ಈವರೆಗೆ ಚೆನ್ನಾಗಿ ನೋಡಿಕೊಂಡರು. ಸಮರ್ಪಕ ಚಿಕಿತ್ಸೆ ನೀಡುವುದರ ಜೊತೆಗೆ ಆತ್ಮಸ್ಥೈರ್ಯ ತುಂಬಿದ್ದಾರೆ. ಗುಣಮಟ್ಟ ಆಹಾರ, ವೈದ್ಯಕೀಯ ಚಿಕಿತ್ಸೆ ನೀಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯ ಋಣ ನಾವೆಂದು ಮರೆಯುವುದಿಲ್ಲ. ಕೋವಿಡ್-19 ನೋಡಲ್ ಅಧಿಕಾರಿ ಡಾ.ಮಲ್ಲಿಕಾರ್ಜುನ, ಡಾ.ಅನಿಲ್, ಡಾ.ಲಿಂಗರಾಜು, ಡಾ.ವಿಜಯಶಂಕರ, ಡಾ.ಸುನೀಲ್, ಡಾ.ವಿನಯ್, ಡಾ.ಸುಜಾತಾ, ಶುಶ್ರೂಷಾ ಅಧೀಕ್ಷಕಿ ಶಾಂತಾಬಾಯಿ, ಡಾ.ಚಿತ್ರಶೇಖರ್, ಡಾ.ಉಮಾಮಹೇಶ್ವರಿ ಸೇರಿದಂತೆ ವೈದ್ಯಕೀಯ ಸಿಬ್ಬಂದಿ ಇದ್ದರು.