ಹೊಸಪೇಟೆ (ವಿಜಯನಗರ): ಕಲುಷಿತ ನೀರು ಸೇವಿಸಿ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮಕರಬ್ಬಿಯಲ್ಲಿ ಗ್ರಾಮಸ್ಥರು ಮೃತಪಡುತ್ತಿದ್ದಾರೆ. ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಈಗಾಗಲೇ 7 ಜನರ ಸಾವು ಸಂಭವಿಸಿದೆ.
ಜಲ ಜೀವನ್ ಯೋಜನೆ ಅನುಷ್ಠಾನದಲ್ಲಿ ಮಾಡಿರುವ ಎಡವಟ್ಟಿನಿಂದ ಜನರ ಪ್ರಾಣಕ್ಕೆ ಕುತ್ತು ಬಂದಿದೆ. ದಿನ ಕಳೆದಂತೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ. ಇಷ್ಟೆಲ್ಲಾ ಅವಾಂತರ ನಡೆಯುತ್ತಿದ್ರೂ, ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಮಾತ್ರ ಗ್ರಾಮದತ್ತ ಮುಖ ಮಾಡಿಲ್ಲ. ನಿನ್ನೆ ನಿಗದಿಯಾಗಿದ್ದ ಭೇಟಿಯನ್ನೂ ಅವರು ರದ್ದುಗೊಳಿಸಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.
ಸೆಪ್ಟೆಂಬರ್ 23ರಂದು ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಮಕರಬ್ಬಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು 150 ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದರು. ಅದರಲ್ಲಿ ಈವರೆಗೆ ಏಳು ಜನ ಮೃತಪಟ್ಟಿದ್ದಾರೆ. ನಿನ್ನೆ ಆನಂದ್ ಸಿಂಗ್ ಹಾಗೂ ಡಿಸಿ ಅನಿರುದ್ಧ್ ಶ್ರವಣ್ ಅವರ ಭೇಟಿ ನಿಗದಿಯಾಗಿತ್ತು. ಆದರೆ ಭಾನುವಾರ ನಾಗಮ್ಮ ದೊಡ್ಡಬಾರಕೇರ (72) ವೃದ್ಧೆಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ದಿಢೀರ್ ಮಕರಬ್ಬಿ ಗ್ರಾಮದ ಭೇಟಿ ಕಾರ್ಯಕ್ರಮ ರದ್ದುಗೊಳಿಸಲಾಗಿದೆ.
ಇದನ್ನೂ ಓದಿ: ಕಲುಷಿತ ನೀರು ಸೇವನೆ ಪ್ರಕರಣ: ಮಕರಬ್ಬಿ ಗ್ರಾಮದಲ್ಲಿ ಸಾವಿನ ಸಂಖ್ಯೆ 7ಕ್ಕೆ ಏರಿಕೆ
ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ವಿಜಯನಗರ ಡಿಸಿ ಅನಿರುದ್ಧ್ ಶ್ರವಣ್, ಅನಿವಾರ್ಯ ಕಾರಣಗಳಿಂದ ಭೇಟಿ ಕಾರ್ಯಕ್ರಮ ರದ್ದು ಮಾಡಲಾಗಿದೆ. ಸದ್ಯದಲ್ಲಿಯೇ ಮತ್ತೆ ಗ್ರಾಮಕ್ಕೆ ತೆರಳುವ ಕಾರ್ಯಕ್ರಮವಿದೆ. ಇನ್ನು ನಿನ್ನೆ ಮೃತಪಟ್ಟ ವೃದ್ಧೆಯ ಸಾವಿನ ಕುರಿತು ನಿಖರ ಕಾರಣದ ವರದಿ ನೀಡುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದಿದ್ದಾರೆ.