ಬಳ್ಳಾರಿ: ರಾಜ್ಯದ ಎರಡು ವಿಧಾನಸಭೆ ಹಾಗೂ ಬೆಳಗಾವಿ ಲೋಕಸಭೆಯ ಉಪಚುನಾವಣೆಯಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್. ಆನಂದ್ಸಿಂಗ್ ಸ್ಪಷ್ಟನೆ ನೀಡಿದರು.
ನಗರದ ವಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಇಂದು ನಾನಾ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾಮಾನ್ಯವಾಗಿ ಆಡಳಿತಾರೂಢ ಪಕ್ಷ ಬಿಜೆಪಿ ಇರೋದರಿಂದಲೇ ಈ ಮೂರು ಬೈ ಎಲೆಕ್ಷನ್ನಲ್ಲಿ ಬಿಜೆಪಿ ಗೆಲುವು ಶತಃ ಸಿದ್ಧ. ಆಡಳಿತಾರೂಢ ಪಕ್ಷ ಯಾವುದೇ ಇರಲಿ. ಬೈ ಎಲೆಕ್ಷನ್ನಲ್ಲಿ ಸೋತಿರುವ ಉದಾಹರಣೆಯಿಲ್ಲ. ಅದು ಕೂಡ ಕಮ್ಮಿ. ಹೀಗಾಗಿ, ಈ ಬೈ ಎಲೆಕ್ಷನ್ ನಲ್ಲಿ ಬಿಜೆಪಿ ಅಭ್ಯರ್ಥಿಗಳು ಖಂಡಿತವಾಗಿಯೂ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆಯ ಪ್ರಕ್ರಿಯೆ ನಗರ ಶಾಸಕ ಸೋಮಶೇಖರ ರೆಡ್ಡಿಗೆ ಬಿಟ್ಟದ್ದು. ಮಹಾನಗರ ಪಾಲಿಕೆ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿಯವರು ಅಭ್ಯರ್ಥಿಗಳ ಆಯ್ಕೆಯ ಪ್ರಕ್ರಿಯೆಯ ಜವಾಬ್ದಾರಿಯನ್ನ ವಹಿಸಲಿದ್ದಾರೆ. ಅವರೇ ನಗರ ಶಾಸಕರಾಗಿರೋದರಿಂದ ಅವರಿಗೆ ಈ ಜವಾಬ್ದಾರಿಯನ್ನ ರಾಜ್ಯ ನಾಯಕರು ವಹಿಸಬಹುದೆಂದು ನಾನು ಭಾವಿಸಿರುವೆ. ಅಕಾಂಕ್ಷಿಗಳ ಪಟ್ಟಿ ಹೆಚ್ಚಿದ್ದರೆ ಅವರನ್ನ ಮನವೊಲಿಸಿ ಅರ್ಹ ಅಭ್ಯರ್ಥಿಗಳನ್ನ ಆಯ್ಕೆ ಮಾಡೋ ಪ್ರಕ್ರಿಯೆಯಲ್ಲಿ ನಾವೆಲ್ಲರೂ ಸಕ್ರಿಯರಾಗಿ ಪಾಲ್ಗೊಳ್ಳುವುದಾಗಿ ಸಚಿವ ಆನಂದ್ಸಿಂಗ್ ತಿಳಿಸಿದರು.
ಏಪ್ರಿಲ್ 10ರವರೆಗೆ ಉಪ ಕಾಲುವೆಗಳಿಗೆ ನೀರು:
ತುಂಗಭದ್ರಾ ಜಲಾಶಯದಿಂದ ಏಪ್ರಿಲ್ 10ರವರೆಗೆ ಉಪಕಾಲುವೆಗಳಿಗೆ ನೀರನ್ನ ಹರಿಬಿಡಲು ನಿರ್ಧರಿಸಿದೆ. ಈಗಾಗಲೇ ಆ ಕುರಿತು ಆದೇಶವನ್ನೂ ಕೂಡ ಹೊರಡಿಸಲಾಗಿದೆ ಎಂದು ಸಚಿವ ಆನಂದ್ ಸಿಂಗ್ ಮಾಹಿತಿ ನೀಡಿದರು.