ಹೊಸಪೇಟೆ(ಬಳ್ಳಾರಿ): ಹೊಸಪೇಟೆ ಪೊಲೀಸರು ಮೂರು ಪ್ರಕರಣಗಳಲ್ಲಿ 11.19 ಲಕ್ಷ ರೂ. ಮೌಲ್ಯದ 56.17 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದು, 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಡಿವೈಎಸ್ಪಿ ವಿ.ರಘು ಕುಮಾರ್ ತಿಳಿಸಿದ್ದಾರೆ.
ನಗರದ ಡಿವೈಎಸ್ಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. 18ರಂದು ಗ್ರಾಮೀಣ ಠಾಣೆಯ ಪೊಲೀಸರು ನಗರದ ಬಿ.ಟಿ.ನಗರದ ಮನೆಯಲ್ಲಿ 9.94 ಲಕ್ಷ ರೂ. ಮೌಲ್ಯದ 49.700 ಕೆಜಿಯನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ ಹೇಮಲತಾ ಹಾಗೂ ಇರ್ಫಾನ್ ಅವರನ್ನು ಬಂಧಿಸಲಾಗಿದೆ. ಗ್ರಾಮೀಣ ಠಾಣೆಯ ಪಿಐ ಶ್ರೀನಿವಾಸ ಮೇಟಿ, ಪಿ.ಎಸ್.ಐ.ಬಸವರಾಜ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ದಾಳಿ ನಡೆಸಿದ್ದಾರೆ ಎಂದು ತಿಳಿಸಿದರು.
ಹೇಮಲತಾ ಕಿಂಗ್ಪಿನ್:
ನಗರ ನಿವಾಸಿ ಹೇಮಲತಾ(38) ಅವರು ಗಾಂಜಾ ಸಾಗಾಣೆಗೆ ಕಿಂಗ್ಪಿನ್ ಆಗಿದ್ದಾರೆ. ಈ ಮಹಿಳೆಯ ಮೂಲಕ ಗಾಂಜಾ ಹೊಸಪೇಟೆಯಲ್ಲಿ ಮಾರಾಟವಾಗುತ್ತಿತ್ತು. ಬಳ್ಳಾರಿಯ ಇರ್ಫಾನ್(28) ಎಂಬಾತ ಪೆಡ್ಲರ್ ಆಗಿದ್ದಾನೆ. ಇನ್ನು ಕೆಲವರು ಆರೋಪಿಗಳನ್ನು ಹಿಡಿಯಬೇಕಾಗಿದೆ. ಹಾಗಾಗಿ ಸದ್ಯ ಯಾವುದೇ ರೀತಿಯ ಮಾಹಿತಿಯನ್ನು ಬಹಿರಂಗ ಪಡಿಸುವುದಿಲ್ಲ ಎಂದು ತಿಳಿಸಿದರು.
ಸೆ. 14 ರಂದು ಪಟ್ಟಣ ಪೊಲೀಸರು ನಗರದ ಕನಕದಾಸ ವೃತ್ತದಲ್ಲಿ 20 ಸಾವಿರ ರೂ. ಮೌಲ್ಯದ 1.210 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಜೆ.ಹನುಮೇಶ, ಜೆ.ಷಣ್ಮುಖ ಎಂಬುವರನ್ನು ಬಂಧಿಸಲಾಗಿದೆ. ಠಾಣೆಯ ಪಿಐ ಶ್ರೀನಿವಾಸ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ ಎಂದು ಹೇಳಿದರು.
ಸೆ. 15ರಂದು ಬಡಾವಣೆ ಪೊಲೀಸ್ ಠಾಣೆಯ ಪೊಲೀಸರು ಎಪಿಎಂಸಿ ಮಾರುಕಟ್ಟೆಯ ಒಳಗಡೆ ದಾಳಿ ನಡೆಸಿ 1.5 ಲಕ್ಷ ರೂ. ಮೌಲ್ಯದ 5 ಕೆಜಿ ಗಾಂಜಾವನ್ನು ವಶಪಡಿಸಿಕೊಂಡು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಎಂ.ಎಚ್.ಮಧು, ಎಂ.ಸುರೇಶ ಕುಮಾರ ಬಂಧಿತರು. ಟಿ.ಬಿ. ಡ್ಯಾಂ ಪೊಲೀಸ್ ಠಾಣೆಯ ಸಿಪಿಐ ವಿ.ನಾರಾಯಣ ಹಾಗೂ ಬಡಾವಣೆ ಪೊಲೀಸ್ ಠಾಣೆಯ ಪಿಎಸ್ಐ ಜಡಿಯಪ್ಪ ಜಂಟಿಯಾಗಿ ಹಾಗೂ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಪ್ರಕರಣವನ್ನು ಭೇದಿಸಿದ್ದಾರೆ ಎಂದು ತಿಳಿಸಿದರು.
ನಗರದಲ್ಲಿ ಚಿಕ್ಕ ಮಕ್ಕಳೂ ಗಾಂಜಾ ಸೇವಿಸುತ್ತಿದ್ದಾರೆ ಎಂದು ಮಾಹಿತಿ ಬಂದಿತ್ತು. ಹಾಗಾಗಿ ಮೂರು ತಂಡಗಳನ್ನು ರಚನೆ ಮಾಡಲಾಗಿತ್ತು. ನಗರದ ಪೊಲೀಸ್ ಅಧಿಕಾರಿಗಳಾದ ನಾರಾಯಣ, ಜಡಿಯಪ್ಪ, ಶ್ರೀನಿವಾಸ ಮೇಟಿ, ಶ್ರೀನಿವಾಸರಾವ್ ನೇತೃತ್ವದಲ್ಲಿ ತಂಡಗಳನ್ನು ರಚನೆ ಮಾಡಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿಸಿದರು.