ಬಳ್ಳಾರಿ : ಗಣಿನಾಡು ಬಳ್ಳಾರಿ ತಾಲೂಕಿನ ಯುವಕನೊಬ್ಬ ಪಕ್ಕಾ ಸಾವಯವ ಪದ್ಧತಿ ಅನುಸರಿಸಿ ನಾನಾ ತೋಟಗಾರಿಕೆ ಬೆಳೆಗಳನ್ನ ಬೆಳೆದು, ಅದರಲ್ಲೇ ಮೇಲುಗೈ ಸಾಧಿಸಿ ತೃಪ್ತಿದಾಯಕ ಜೀವನ ಸಾಗಿಸಲು ಮುಂದಾಗಿದ್ದಾರೆ.
ಬಳ್ಳಾರಿ ತಾಲೂಕಿನ ಇಬ್ರಾಹಿಂಪುರ ಗ್ರಾಮದ ಎತ್ತಿನಬೂದಿಹಾಳು ರಸ್ತೆಯಲ್ಲಿರುವ ತಮ್ಮ 9 ಎಕರೆ ಭೂಮಿಯಲ್ಲಿ ನಾನಾ ತೋಟಗಾರಿಕೆ ಬೆಳೆಗಳನ್ನ ಬೆಳೆದಿದ್ದಾರೆ ಬಿ.ರವಿಕುಮಾರ್. ಸಾವಯವ ಕೃಷಿ ಪದ್ಧತಿ ಮೈಗೂಡಿಸಿಕೊಂಡಿದ್ದಾರೆ. ಕಳೆದ ಎರಡು-ಮೂರು ವರ್ಷಗಳಿಂದಲೂ ಪ್ರಕೃತಿದತ್ತ ವ್ಯವಸಾಯದಲ್ಲಿ ಯಶಸ್ಸು ಕಾಣ್ತಿದ್ದಾರೆ.
ಎಂಬಿಎ ಪದವೀಧರರಾದ ರೈತ ಬಿ.ರವಿಕುಮಾರ್, ಈ ಮೊದಲು ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಕೈತುಂಬ ಸಂಬಳವಿತ್ತು. ಆದರೆ, ಈ ವೇಳೆ ಪಿಜಿ ಸೆಂಟರ್ ಹಾಗೂ ಹಾಸ್ಟೆಲ್ನಲ್ಲಿರುವಾಗ ಕೆಮಿಕಲ್ ಮಿಶ್ರಿತ ಆಹಾರ ಸೇವನೆಯಿಂದ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದಲೇ ಈ ಸಾವಯವ ಕೃಷಿಯತ್ತ ಮುಖಮಾಡಲು ಅವರಿಗೆ ಪ್ರೇರಣೆಯಾಯಿತು. ಹೀಗಾಗಿ, ಪ್ರಕೃತಿದತ್ತವಾದ ವ್ಯವಸಾಯಕ್ಕೆ ಕೈ ಹಾಕಿ ಯಶಸ್ಸು ಕಂಡೆ ಅಂತಾರೆ ಈ ಯುವ ರೈತ.
ಮೂರು ಎಕರೆಗೆ ಐದು ಟ್ರ್ಯಾಕ್ಟರ್ ಹಸುವಿನ ಗೊಬ್ಬರ ಸಿಂಪಡಣೆ ಮಾಡೋ ಮುಖೇನ ಜೀವಾಮೃತ, ಗೋಕೃಪಾ ಮೃತ, ವೇಸ್ಟ್ ಡಿ ಕಂಪೋಷರ್, ಅಗ್ನಿ ಅಸ್ತ್ರ, ನೀಮಾಸ್ತ್ರ, ದಶಪಾಣಿ ಕಸಾಯಿ, ಸಪ್ತದಾನಿ ಹಾಕೋ ಮೂಲಕ ಸಾವಯವ ಕೃಷಿಯತ್ತ ಮುಖಮಾಡಿ ಇತರರಿಗೆ ಮಾದರಿಯಾಗಿದ್ದಾರೆ.
ತಮ್ಮ 9 ಎಕರೆ ಜಮೀನಿನಲ್ಲಿ ಪಪ್ಪಾಯ, ನುಗ್ಗೆಕಾಯಿ, ಟೊಮ್ಯಾಟೊ, ಬೂದುಗುಂಬಳ, ರಾಯಲ್ ಗ್ರೀನ್ ಪೇರಲ, ಅಲಹಾಬಾದ್ ಸಫೇದಾ ಪೇರಲ, ಎಲ್-49 ಪೇರಲ, ನೇರಳೆ ಹಣ್ಣು, ಮಾವಿನಹಣ್ಣು, ನಿಂಬೆಹಣ್ಣು, ಸೀತಾಫಲ, ಅಂಜೂರ ಸೇರಿ ನಾನಾ ವಿಧದ ತೋಟಗಾರಿಕೆ ಬೆಳೆಗಳನ್ನ ಸಮೃದ್ಧಿಯಾಗಿ ಬೆಳೆದಿದ್ದಾರೆ.
ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ ಸಾವಯವ ಕೃಷಿಕ ಬಿ.ರವಿಕುಮಾರ್, ಇಂದಿನ ಆಧುನಿಕ ಯುಗದಲ್ಲಿ ಜಂಕ್ಫುಡ್ಗಳೇ ಹೆಚ್ಚಿರೋದರಿಂದ ರೋಗ-ರುಜಿನಗಳು ಹೆಚ್ಚಾಗಿವೆ. ಹೀಗಾಗಿ, ನನಗೆ ಈ ಜಂಕ್ ಫುಡ್ ಮುಕ್ತ ಆಹಾರ ಉತ್ಪಾದನೆ ಮಾಡಬೇಕು ಅನಿಸಿತು. ಆದ್ದರಿಂದ ಸಾವಯವ ಕೃಷಿಯತ್ತ ಮುಖ ಮಾಡಿರುವೆ. ಈ ಪದ್ಧತಿ ತೃಪ್ತಿ ತಂದಿದೆ.
ಈ ಕೃಷಿಯಲ್ಲೇ ನಾನು ಒಂದಿಷ್ಟಾದ್ರೂ ಕೂಡ ವಿಷಮುಕ್ತ ಆಹಾರ ಪೂರೈಕೆ ಮಾಡಲು ಶ್ರಮಿಸುವೆ. ಅದರಿಂದ ನನ್ನ ಕುಟುಂಬವಾದ್ರೂ ವಿಷಮುಕ್ತ ಆಹಾರ ಸೇವನೆ ಮಾಡಲಿ ಎಂಬುದೇ ನನ್ನ ಉದ್ದೇಶ ಅಂತಾರೆ ಯುವ ರೈತ ರವಿಕುಮಾರ್.