ಬಳ್ಳಾರಿ: ಈಗಾಗಲೇ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಅಲ್ಲೀಪುರ ಹಾಗೂ ಶಿವಪುರ ಕೆರೆಗಳನ್ನ ಭರ್ತಿಗೊಳಿಸಲಾಗಿದೆ. ಮುಂದಿನ ಜುಲೈ ತಿಂಗಳವರೆಗೂ ಬಳ್ಳಾರಿ ಮಹಾ ನಗರಕ್ಕೆ ಕುಡಿಯುವ ನೀರಿನ ಅಭಾವ ಉಂಟಾಗದಂತೆ ಮುಂಜಾಗ್ರತೆ ಕ್ರಮ ವಹಿಸಲಾಗಿದೆ. ಆದ್ರೂ ಕೂಡ ಕುಡಿಯುವ ನೀರಿನ ಅಭಾವ ಎದ್ದು ಕಾಣುತ್ತಿದೆ.
ಬಿರು ಬೇಸಿಗೆಯಲ್ಲಿ ನೀರಿನ ತೇವಾಂಶ ಮತ್ತು ಸಾಂದ್ರತೆ ಕಮ್ಮಿ ಆಗೋದನ್ನು ಲೆಕ್ಕಾಚಾರ ಮಾಡಿಯೇ ಈ ಕೆರೆಗಳಿಗೆ ನೀರು ತುಂಬಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇಲಾಖೆ ಎಇಇ ಎಂ.ಸುಕುಮುನಿ ನಾಯ್ಕ, ಜುಲೈ 15 ರವರೆಗೆ ಬಳ್ಳಾರಿ ಮಹಾನಗರಕ್ಕೆ ನೀರು ಪೂರೈಕೆ ಮಾಡೋ ಸಾಮರ್ಥ್ಯವನ್ನು ಉಭಯ ಕೆರೆಗಳು ಹೊಂದಿವೆ. ಮುಂದಿನ 101 ದಿನಗಳಿಗೆ ಅಲ್ಲೀಪುರ ಕೆರೆ ನೀರು, 62 ದಿನಗಳಿಗೆ ಶಿವಪುರ ಕೆರೆ ಹೊಂದಿದೆ. ಆದರೆ, ಬಳ್ಳಾರಿ ಮಹಾನಗರ ಪಾಲಿಕೆ ಹೇಗೆ ನಿರ್ವಹಣೆ ಮಾಡುತ್ತೋ ನನಗಂತೂ ಗೊತ್ತಿಲ್ಲ. ನಾವಂತೂ ಉಭಯ ಕೆರೆಗಳಲ್ಲಿ ಸಮರ್ಪಕ ನೀರು ಸಂಗ್ರಹಣೆಗೆ ಕ್ರಮವಹಿಸಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ: ಸಂಡೂರು: ರಸ್ತೆಯಲ್ಲಿ ನೀರು ಕುಡಿದ ಚಿರತೆ
ಕರ್ನಾಟಕ ಜನಸೈನ್ಯ ಸಂಘಟನೆಯ ರಾಜ್ಯಾಧ್ಯಕ್ಷ ಕೆ.ಎರಿಸ್ವಾಮಿ ಮಾತನಾಡಿ, ಪ್ರತಿಬಾರಿ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಅಭಾವತೆ ಉಂಟಾಗೋದು ಸರ್ವೇ ಸಾಮಾನ್ಯ. ಆದರೆ ಈ ಬಾರಿ ಮಳೆ ಸಮರ್ಪಕವಾಗಿ ತುಂಗಭದ್ರಾ ಜಲಾಶಯ ತುಂಬಿದೆ. ಕೆರೆಗಳ ಭರ್ತಿ ಮಾಡೋ ಕಾರ್ಯ ಪೂರ್ಣಗೊಂಡಿದ್ದು, ಸಮರ್ಪಕ ನೀರು ಸಂಗ್ರಹಣೆಗೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸೂಕ್ತ ಕ್ರಮವಹಿಸಿದೆ. ಆದರೆ ಬಳ್ಳಾರಿ ಮಹಾನಗರ ಪಾಲಿಕೆ ಮಾತ್ರ ಈ ಕುಡಿಯುವ ನೀರಿನ ಪೂರೈಕೆಗೆ ಸೂಕ್ತ ಕ್ರಮವಹಿಸುತ್ತಿಲ್ಲ. ನೀರಿನ ಲಭ್ಯತೆ ಹೆಚ್ಚಿದರೂ ಕೂಡ ಮಹಾನಗರ ಪಾಲಿಕೆ ಕುಡಿಯುವ ನೀರಿನ ಅಲಭ್ಯತೆ ಸೃಷ್ಠಿಸಲು ಮುಂದಾಗಿರೋದು ನಿಜಕ್ಕೂ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಖಾಸಗಿ ಟ್ಯಾಂಕರ್ಗಳ ಮಾಲೀಕರು ಹಾಗೂ ಮಹಾನಗರ ಪಾಲಿಕೆಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿರೋ ಅನುಮಾನವೂ ಕೂಡ ಇಲ್ಲಿ ದಟ್ಟವಾಗಿ ಎದ್ದು ಕಾಣುತ್ತಿದೆ ಎಂದು ದೂರಿದ್ದಾರೆ.