ಬಳ್ಳಾರಿ: ನಗರದ ತಾಳೂರು ರಸ್ತೆಯಲ್ಲಿರುವ 16ನೇ ಕ್ರಾಸ್ನ ಖಾಲಿ ನಿವೇಶನದಲ್ಲಿ ಬೆಳೆದು ನಿಂತಿದ್ದ ಬಳ್ಳಾರಿ ಜಾಲಿ ಪೊದೆಯೊಳಗಿದ್ದ ಕರಡಿ ಕೊನೆಗೂ ಅರಣ್ಯ ಇಲಾಖೆಯ ಬಲೆಗೆ ಬಿದ್ದಿದೆ.
ಬೆಳಿಗ್ಗೆ 8.30ರ ಸುಮಾರಿಗೆ ಕರಡಿ ಹಿಡಿಯುವ ಕಾರ್ಯಾಚರಣೆ ಆರಂಭವಾಗಿದ್ದು, ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಕರಡಿ ಬಲೆಗೆ ಬಿದ್ದಿದೆ. ಸತತ 5.50 ಗಂಟೆಗಳ ಕಾಲ ನಡೆದ ಈ ಕಾರ್ಯಾಚರಣೆಯಲ್ಲಿ ಅರವಳಿಕೆ ತಜ್ಞರ ಸಹಕಾರ ಮತ್ತು ಸಲಹೆಯೊಂದಿಗೆ ಕರಡಿಯನ್ನ ಸೆರೆ ಹಿಡಿಯಲಾಗಿದೆ.
ಅರವಳಿಕೆ ತಜ್ಞರ ಸೂಚನೆಯ ಮೇರೆಗೆ ಬಳ್ಳಾರಿ ಜಾಲಿ ಪೊದೆಯೊಳಗೆ ಜೆಸಿಬಿ ಮೂಲಕ ಕರಡಿಗೆ ಅರವಳಿಕೆ ಮದ್ದು ನೀಡಿ ಬಳಿಕ ಬಲೆಯ ಸಹಾಯದೊಂದಿಗೆ ಆ ಕರಡಿಯನ್ನ ಸೆರೆ ಹಿಡಿದು ಬೋನಿಗೆ ಅಟ್ಟಲಾಯಿತು.
ಗ್ರಾಮಾಂತರ ಠಾಣೆಯ ಪೊಲೀಸ್ ಅಧಿಕಾರಿಗಳಾದ ವೈ.ಎಸ್.ಹನುಮಂತಪ್ಪ, ನಿರಂಜನ, ಅರಣ್ಯ ಇಲಾಖೆ ಡಿಎಫ್ಓ ಸಿದ್ಧರಾಮಪ್ಪ ಚಲ್ಕಾಪುರೆ, ಗೃಹ ರಕ್ಷಕ ದಳದ ಸಮಾದ್ವೇಷ್ಟ ಎಂ.ಎ.ಷಕೀಬ್, ರೆಡ್ ಕ್ರಾಸ್ ಸಂಸ್ಥೆಯ ಮುಖ್ಯಸ್ಥ ಭರತ ಜೈನ್, ವೈದ್ಯ ಡಾ.ಎಸ್.ಕೆ.ಅರುಣಕುಮಾರ, ಡಾ.ಬಿ.ಕೆ.ಸುಂದರ, ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ, ಮಹಾನಗರ ಪಾಲಿಕೆ ಸದಸ್ಯರಾದ ಶ್ರೀನಿವಾಸ ಮೋತ್ಕರ್ ಹಾಗೂ ಹನುಮಂತಪ್ಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಕರಡಿ ಮರಿಗಳ ಪತ್ತೆಗೆ ಕ್ರಮ:
ಈ ಕರಡಿಯೊಂದಿಗೆ ಎರಡು ಮರಿಗಳು ನಗರಕ್ಕೆ ಬಂದಿವೆ ಎಂಬ ಮಾಹಿತಿ ಇದೆ. ಅದರ ಹೆಜ್ಜೆಯ ಗುರುತು ಪತ್ತೆ ಹಚ್ಚಿ ಅವುಗಳ ರಕ್ಷಣೆಗೂ ಕ್ರಮ ಕೈಗೊಳ್ಳಲಾಗುವುದು. ಈ ಕರಡಿ ನಿನ್ನೆ ಮಧ್ಯಾಹ್ನ ಬಳ್ಳಾರಿ ನಗರಕ್ಕೆ ಪ್ರವೇಶಿಸಿದೆ ಎಂಬ ಮಾಹಿತಿ ಇದೆ. ಅದನ್ನೂ ಕೂಡ ಪರಿಶೀಲನೆ ಮಾಡಲಾಗುವುದು ಎಂದು ಡಿಎಫ್ಓ ಸಿದ್ಧರಾಮಪ್ಪ ಚಲ್ಕಾಪುರೆ ತಿಳಿಸಿದರು.
ಪಶು ವೈದ್ಯೆ ಡಾ.ವಾಣಿ ಮಾತನಾಡಿ, ಇದು ಜನ ವಸತಿ ಇರುವ ಪ್ರದೇಶವಾಗಿದ್ದರಿಂದ ಇಷ್ಟೊಂದು ಸಮಯಾವಕಾಶ ಬೇಕಾಯಿತು. ಪ್ರಾಣಹಾನಿ ಸಂಭವಿಸಬಾರದೆಂಬ ಸದುದ್ದೇಶದೊಂದಿಗೆ ಬಹಳ ಕಾಲಾವಕಾಶ ಪಡೆದು ಕರಡಿ ಹಿಡಿಯಬೇಕಾದ ಅನಿವಾರ್ಯತೆ ಬಂದೊದಗಿತು ಎಂದರು.