ಬಳ್ಳಾರಿ: ಜಿಲ್ಲೆಯ ಸರಳಾದೇವಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೋರ್ವರು ಆಟೋ ರಿಕ್ಷಾ ಚಲಿಸೋದನ್ನ ಪ್ರವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ.
ಹೌದು, ಅತಿಥಿ ಉಪನ್ಯಾಸಕ ಕುಮಾರಸ್ವಾಮಿ ತಮ್ಮ ವೃತ್ತಿಯಿಂದ ಜೀವನ ಸಾಗಿಸಲಾರದೆ ಪರದಾಡುತ್ತಿದ್ದರು. ಈ ವೇಳೆ ಅವರಿಗೆ ಥಟ್ಟನೆ ಹೊಳೆದಿದ್ದು ಆಟೋ ರಿಕ್ಷಾ ಚಾಲಕನ ವೃತ್ತಿ. ಮೂಲತಃ ಜಿಲ್ಲೆಯ ಸಿರುಗುಪ್ಪ ತಾಲೂಕಿನವರಾದ ಕುಮಾರಸ್ವಾಮಿ, ಲಾಕ್ಡೌನ್ ಎಫೆಕ್ಟ್ನಿಂದಾಗಿ ಅತಿಥಿ ಉಪನ್ಯಾಸಕ ವೃತ್ತಿಯನ್ನ ಅಷ್ಟೊಂದಾಗಿ ನೆಚ್ಚಿಕೊಂಡಿರಲು ಸಾಧ್ಯವಿಲ್ಲ ಎಂಬ ಕಟು ಸತ್ಯವನ್ನ ಅರಿತು ಪ್ರವೃತ್ತಿಯನ್ನಾಗಿ ಆಟೋ ಚಾಲಕನ ವೃತ್ತಿ ಆಯ್ಕೆ ಮಾಡಿಕೊಂಡಿದ್ದಾರೆ. ಪ್ರತಿ ದಿನ 300ರಿಂದ 400 ರೂ. ಸಂಪಾದಿಸಿ ಕುಟುಂಬ ಸದಸ್ಯರೊಂದಿಗೆ ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿದ್ದಾರೆ.
ದುಡಿಮೆಯ ನಂಬಿ ಬದುಕು. ಅದರಲಿ ದೇವರ ಹುಡುಕು ಎಂಬ ನಾಣ್ಣುಡಿಯಂತೆ ಕುಮಾರಸ್ವಾಮಿ ನಡೆದುಕೊಳ್ಳುತ್ತಿದ್ದಾರೆ. ಬಳ್ಳಾರಿಯ ಜಿಲ್ಲಾಸ್ಪತ್ರೆ ಮುಂಭಾಗದಲ್ಲಿ ಬೆಳಗ್ಗೆ 10 ಗಂಟೆಗೆ ಆಟೋ ರಿಕ್ಷಾ ಚಾಲಕನಾಗಿ ವೃತ್ತಿಯನ್ನಾರಂಭಿಸಿದ್ರೆ, ಸಂಜೆ ಹೊತ್ತಿಗೆ ತಮ್ಮ ವೃತ್ತಿಯಿಂದ ಕೆಳಗಿಳಿಯುತ್ತಾರೆ.
ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಕೇವಲ ಅತಿಥಿ ಉಪನ್ಯಾಸಕನಾಗಿ ಕೆಲಸ ಮಾಡಿದ್ರೆ ಜಿವನ ಸಾಗಿಸಲು ಸಾಧ್ಯವಾಗೋದಿಲ್ಲ. ಆರೇಳು ತಿಂಗಳಿಗೊಮ್ಮೆ ಸಂಭಾವನೆ ಬರುವುದರಿಂದ ದೈನಂದಿನ ಅಥವಾ ಮಾಸಿಕ ಖರ್ಚು- ವೆಚ್ಚಕ್ಕಾಗಿ ಬೇಕಾಗುವ ಹಣದ ಅಭಾವ ಉಂಟಾಗಿದ್ದರಿಂದ ಈ ಪ್ರವೃತ್ತಿಗೆ ಇಳಿದಿರುವೆ ಎಂದರು.