ಬಳ್ಳಾರಿ: ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಆನಂದಸಿಂಗ್ ಗೆಲುವು ಖಚಿತ. ಈ ಸರ್ಕಾರದಲ್ಲಿ ಅವರು ಮಂತ್ರಿಯಾಗ್ತಾರೆ ಎಂದು ಬಳ್ಳಾರಿ ನಗರ ಶಾಸಕ ಸೋಮಶೇಖರರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ವಿಜಯನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನಿಮಿತ್ತ ಪಟೇಲ್ ನಗರದಲ್ಲಿರೋ ಮಾಜಿ ಶಾಸಕರ ಕಚೇರಿಯ ಸಭಾಂಗಣದಲ್ಲಿ ನಡೆದ ಹಿಂದುಳಿದ ವರ್ಗಗಳ ಸಭೆಯಲ್ಲಿ ಅವರು ಮಾತನಾಡಿ, ಆನಂದಸಿಂಗ್ ಮಂತ್ರಿಯಾಗಿ ಈ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ. ಅವರು 50,000 ಮತಗಳ ಅಂತರದಿಂದ ಗೆಲ್ತಾರೆ ಅಂತ ನಾವು ಹೇಳೋಂಗಿಲ್ಲ. ಯಾಕಂದ್ರೆ, ಆನಂದಸಿಂಗ್ ಅವರು ಅದಕ್ಕಿಂತಲೂ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಬಹುದು ಎಂದರು.
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯವರನ್ನು ಮುನ್ನೆಲೆಗೆ ತರೋ ಮುಖೇನ ಸಹೋದರ ಪ್ರೀತಿಯನ್ನು ಶಾಸಕ ಸೋಮ ಶೇಖರರೆಡ್ಡಿ ಮೆರೆದಿದ್ದಾರೆ. ಬಳ್ಳಾರಿ ಮಹಾನಗರಕ್ಕೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಸಲುವಾಗಿ, ಸ್ಥಳಾವಕಾಶ ಕೇಳಲು ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಬಿಜೆಪಿ ಮುಖಂಡ ಕೆ.ಎ.ರಾಮಲಿಂಗಪ್ಪ ಹಾಗೂ ನನ್ನನ್ನ ಜನಾರ್ದನರೆಡ್ಡಿ ಹೆಲಿಕಾಪ್ಟರ್ನಲ್ಲಿ ಬೆಂಗಳೂರಿಗೆ ಕಳಿಸಿದ್ರು. ಈಶ್ವರಪ್ಪ ಅವರನ್ನ ಭೇಟಿಯಾಗುವಂತೆ ತಿಳಿಸಿದ್ರು. ಅಲ್ಲಿಗೆ ಹೋಗಿ ಮೂರೇ ಮೂರು ಗಂಟೆಗಳಲ್ಲಿ ಅಂದಾಜು 293 ಎಕರೆ ಪ್ರದೇಶವನ್ನು ಪಿಡಬ್ಲ್ಯುಡಿನಿಂದ ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡಿ ಕೊಟ್ಟಿದ್ದರು. ಈ ರೀತಿಯ ಅಭಿವೃದ್ಧಿಕಾರ್ಯಗಳು ಆಗಬೇಕೆಂದ್ರೆ ನಮ್ಮ ಸರ್ಕಾರ ಇರಬೇಕು ಎಂದರು.