ಬಳ್ಳಾರಿ : ಹಾಡಹಗಲೇ ಇಬ್ಬರು ಮಹಿಳೆಯರು ಬಟ್ಟೆ ಅಂಗಡಿಗೆ ನಯವಾಗಿ ಸೀರೆ ಖರೀದಿಗೆ ಬಂದು ಮಾಡಬಾರದ ಕೆಲಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿನ ಗಾಂಧಿನಗರದ ಹೌಸಿಂಗ್ ಬೋರ್ಡ್ ಕಾಲೋನಿಯ ವಿಜಯಶ್ರೀ ಸ್ಯಾರಿ ಅಂಗಡಿಯಲ್ಲಿ ನಾರಿಯರು ದುಷ್ಕೃತ್ಯವೆಸಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇಬ್ಬರು ಮಹಿಳೆಯರು ಮತ್ತು ಮೂವರು ಪುರುಷರನ್ನೊಳಗೊಂಡ ತಂಡವವೊಂದು ಇಲ್ಲಿನ ಕಾಲೋನಿಗಳಲ್ಲಿ ಇರುವ ಬಟ್ಟೆ ಅಂಗಡಿಗಳಿಗೆ ಸೀರೆ ಖರೀದಿಸುವ ನೆಪದಲ್ಲಿ ಆಗಮಿಸಿ, ಅಂಗಡಿಯವರ ಗಮನ ಬೇರೆಡೆ ಸೆಳೆದು ಲಕ್ಷಾಂತರ ರೂಪಾಯಿ ಮೌಲ್ಯದ ರೇಷ್ಮೆ ಸೀರೆಗಳನ್ನು ಕದ್ದು ಪರಾರಿಯಾಗಿದ್ದಾರೆ.
ವಿಜಯಶ್ರೀ ಸ್ಯಾರಿ ಅಂಗಡಿಗೆ ಬಟ್ಟೆ ಖರೀದಿ ಮಾಡುವ ನೆಪದಲ್ಲಿ ಆಗಮಿಸಿದ ಈ ತಂಡ, ಸುಮಾರು ಮೂರು ಲಕ್ಷ ರೂಪಾಯಿ ಬೆಲೆ ಬಾಳುವ ಸೀರೆಗಳನ್ನು ಎಗರಿಸಿ ಪರಾರಿಯಾಗಿದ್ದಾರೆ. ಬಳಿಕ ಇವರ ನಡವಳಿಕೆಯಿಂದ ಅನುಮಾನಗೊಂಡ ಅಂಗಡಿ ಮಾಲೀಕರು ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಖತರ್ನಾಕ್ ಕಳ್ಳರ ಕೈಚಳಕ ಬಯಲಾಗಿದೆ.
ಅಂಗಡಿಯಿಂದ ಒಟ್ಟು 25 ಸೀರೆಗಳು ಕಳ್ಳತನವಾಗಿದ್ದು, ಇದರಲ್ಲಿ 10 ಸಾವಿರಕ್ಕೂ ಅಧಿಕ ಬೆಲೆ ಬಾಳುವ ರೇಷ್ಮೆ ಸೀರೆಗಳು ಸೇರಿದಂತೆ ಇತರೆ ಹೆಚ್ಚು ಮೌಲ್ಯದ ಸೀರೆಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಇದಲ್ಲದೆ ಈ ಕಳ್ಳರ ಗುಂಪು ಇತರ ಬಟ್ಟೆ ಅಂಗಡಿಗಳಿಗೆ ತೆರಳಿ ಕಳ್ಳತನ ಮಾಡಲು ಯತ್ನಿಸಿರುವ ಸಿಸಿಟಿವಿ ದೃಶ್ಯಗಳು ಲಭ್ಯವಾಗಿವೆ.
ಪ್ರಕರಣ ಸಂಬಂಧ ಅಂಗಡಿ ಮಾಲೀಕರಾದ ಕಲ್ಯಾಣಿಯವರು ಗಾಂಧಿನಗರ ಪೋಲಿಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಓದಿ : ಕಲುಷಿತ ನೀರು ಕುಡಿದು ಮೃತಪಟ್ಟ ಮೂವರು: ಕಾರ್ಮಿಕರ ಶವಗಳನ್ನು ರಸ್ತೆಯ ಪಕ್ಕದ ಕಣಿವೆಗೆ ಎಸೆದ್ರು!