ಹೊಸಪೇಟೆ (ವಿಜಯನಗರ): ರಾಜ್ಯಾದ್ಯಂತ ಮಳೆ ಆರ್ಭಟ ಮುಂದುವರಿದಿದೆ. ಇಂದು ಬೆಳಗ್ಗೆ ತುಂಗಭದ್ರಾ ಜಲಾಶಯಕ್ಕೆ 75,008 ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. ಈಗ ಜಲಾಶಯದ ಒಳ ಹರಿವು ಹೆಚ್ಚಾಗಿದ್ದು, 1,20,411 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇದು ಈ ವರ್ಷದ ಗರಿಷ್ಠ ಪ್ರಮಾಣದ ಒಳಹರಿವು ಆಗಿದೆ ಎಂದು ತಿಳಿದುಬಂದಿದೆ.
ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಳವಾಗುವ ಸಂಭವಿದ್ದು ನದಿಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ತುಂಗಭದ್ರಾ ಆಡಳಿತ ಮಂಡಳಿಯ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ. ಸದ್ಯ ಜಲಾಶಯದಲ್ಲಿ 1625.14 ಅಡಿ ನೀರು ಇದ್ದು, 73.357 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯ ಭರ್ತಿಯಾಗಲು ಇನ್ನು 8 ಅಡಿ ಮಾತ್ರ ಬಾಕಿ ಇದೆ. ಸದ್ಯ ಜಲಾಶಯಕ್ಕೆ 1,20,411 ಕ್ಯೂಸೆಕ್ ನೀರು ಹರಿದು ಬರುತ್ತಿದೆ.
![75,008 cusec water to Tungabhadra Reservoir](https://etvbharatimages.akamaized.net/etvbharat/prod-images/kn-hpt-02-tb-dam-water-vsl-ka10031_24072021130114_2407f_1627111874_360.jpg)
ಈ ಕುರಿತು ಪ್ರಕಟಣೆಯನ್ನು ಹೊರಡಿಸಿರುವ ತುಂಗಭದ್ರಾ ಆಡಳಿತ ಮಂಡಳಿಯ ಕಾರ್ಯನಿರ್ವಾಹಕ ಇಂಜಿನಿಯರ್, ಶಿವಮೊಗ್ಗದಿಂದ ನದಿಗೆ 2,11,890 ಕ್ಯೂಸೆಕ್ ನೀರು ಹರಿದು ಬರುವ ಸಾಧ್ಯತೆ ಇದೆ. ತುಂಗಭದ್ರಾ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರಲಿದೆ. ಹಾಗಾಗಿ ಜುಲೈ 25 ರಂದು ಯಾವುದೇ ಸಂದರ್ಭದಲ್ಲಿ ನದಿಗೆ ನೀರು ಹರಿಸು ಸಾಧ್ಯತೆಯಿದ್ದು, ನದಿ ಪಾತ್ರದ ಜನರು ಮುಂಜಾಗ್ರತೆ ಸಲುವಾಗಿ ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಮನೆ ಜಲಾವೃತ.. ಜೈಂಟ್ಸ್ ಗ್ರೂಪ್ನಿಂದ ಗರ್ಭಿಣಿ ಸ್ಥಳಾಂತರ
ಶಿವಮೊಗ್ಗ ಸೇರಿದಂತೆ ಜಲಾಶಯದ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಇದೇ ಒಳಹರಿವು ಇದ್ದರೆ ಮುಂದಿನ ಐದು ದಿನಗಳಲ್ಲೇ ಡ್ಯಾಮ್ ಭರ್ತಿಯಾಗುವ ಸಾಧ್ಯತೆ ಇದೆ ಎಂದು ತುಂಗಭದ್ರಾ ಜಲಾಶಯದ ಅಧಿಕಾರಿಗಳು ತಿಳಿಸಿದರು.