ವಿಜಯನಗರ: ಕೊಟ್ಟೂರು ಪಟ್ಟಣದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ವ್ಯಕ್ತಿಯನ್ನು ಕಿಡ್ನಾಪ್ ಮಾಡಿ 20 ಲಕ್ಷ ರೂ. ಪಡೆದು ಬಿಟ್ಟುಕಳಿಸಿದ್ದ ಆರೋಪಿಗಳನ್ನು ಪ್ರಕರಣ ದಾಖಲಾದ 24 ಗಂಟೆಯಲ್ಲೇ ಕೊಟ್ಟೂರು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ 7 ಮಂದಿ ಆರೋಪಿಗಳನ್ನು ಬಂಧಿಸಿ, 16.52 ಲಕ್ಷ ರೂ. ನಗದು ಜಪ್ತಿ ಮಾಡಿಕೊಳ್ಳಲಾಗಿದೆ.
ಕೊಟ್ಟೂರು ಪಟ್ಟಣದಲ್ಲಿ ಟೈಲರಿಂಗ್ ಕೆಲಸದೊಂದಿಗೆ ರಿಯಲ್ ಎಸ್ಟೇಟ್ ವ್ಯವಹಾರದಲ್ಲೂ ತೊಡಗಿದ್ದ ಹಾಲೇಶ್ ಎಂಬುವರನ್ನು ಜು. 20ರಂದು ಅಪರಿಚಿತರು ಅಪಹರಿಸಿದ್ದರು. ಪ್ರಕರಣದಲ್ಲಿ ಶಾಂತಕುಮಾರ(24), ಮಂಜು(26), ರಾಕೇಶ್(19), ಚಿರಾಗ್(19), ಶಿವಕುಮಾರ್(21), ರಾಹುಲ್(21) ಮತ್ತು ಅಲ್ತಾಫ್(23) ಎಂಬುವರನ್ನು ಬಂಧಿಸಲಾಗಿದೆ. ಇವರಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿಗಳಾಗಿದ್ದಾರೆ.
ಸೈಟ್ ಖರೀದಿಸುವ ನೆಪದಲ್ಲಿ ಬಂದ ಅಪರಿಚಿತರು ಹಾಲೇಶ್ರನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದರು. ಬಳಿಕ ಮಾರ್ಗ ಮಧ್ಯ ಮಾರಕಾಸ್ತ್ರ ತೋರಿಸಿ ಕೊಲೆ ಬೆದರಿಕೆ ಹಾಕಿದ್ದು, 80 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಅಷ್ಟೊಂದು ಹಣ ನೀಡಲು ಆಗಲ್ಲ ಎಂದಾಗ ಅಪಹರಣಕಾರರು 20 ಲಕ್ಷ ರೂ.ಗೆ ಇಳಿಸಿದ್ದರು. 20 ಲಕ್ಷಕ್ಕೆ ಒಪ್ಪಿದ ಹಾಲೇಶ್, ಬಳಿಕ ತಮ್ಮ ಅಳಿಯನ ಮೂಲಕ ತಂದು ಹಣ ನೀಡಿದಾಗ ಅದೇ ದಿನ ರಾತ್ರಿ ಪಟ್ಟಣದ ಉಜ್ಜನಿ ರಸ್ತೆ ಬಳಿ ಬಿಟ್ಟು ಹೋಗಿದ್ದರು.
ನಂತರ ಹಾಲೇಶ್ ಈ ಬಗ್ಗೆ ಕೊಟ್ಟೂರು ಠಾಣೆಗೆ ದೂರು ನೀಡಿದ್ದರು. ಮೂರು ತಂಡಗಳ ಮೂಲಕ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು 24 ಗಂಟೆಯಲ್ಲೇ ಆರೋಪಿಗಳ ಹೆಡೆಮುರಿಕಟ್ಟಿದ್ದು, 16 ಲಕ್ಷದ 52 ಸಾವಿರ ರೂ. ನಗದು, ಅಪಹರಣಕ್ಕೆ ಬಳಸಲಾದ ಟೊಯೊಟಾ ವಾಹನ, 5 ಮೊಬೈಲ್ ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಸಿನಿಮಾ ಸ್ಟೈಲಲ್ಲಿ ಚೇಸಿಂಗ್.. ಗಂಗಾವತಿ ಬಳಿ ಗುಂಡು ಹಾರಿಸಿ ಡಕಾಯಿತರನ್ನು ಬಂಧಿಸಿದ ಖಾಕಿ