ಬಳ್ಳಾರಿ: ಸಂಡೂರು ತಾಲೂಕಿನ ತೋರಣಗಲ್ಲಿನ ಜಿಂದಾಲ್ ಉಕ್ಕು ಕಾರ್ಖಾನೆಯೊಂದರಲ್ಲೇ 33 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ನಿನ್ನೆ 17 ಮಂದಿ ಸೋಂಕಿತರು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಆಗಿದ್ದಾರೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.
ಬುಧವಾರ ಜಿಲ್ಲೆಯ ಬಳ್ಳಾರಿ ತಾಲೂಕಿನ ಹರಗಿನಡೋಣಿ ಗ್ರಾಮದ 21 ವರ್ಷದ ಯುವತಿಗೆ ಈ ಮಹಾಮಾರಿ ಕೊರೊನಾ ಸೋಂಕಿರೋದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆಕೆಯೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ತಂದೆ-ತಾಯಿ, ಅಜ್ಜ-ಅಜ್ಜಿ ಮತ್ತು ಆಕೆಯ ಸಹೋದರನನ್ನೂ ಸಾಂಸ್ಥಿಕ ಕ್ವಾರಂಟೈನ್ ಗೆ ಶಿಫ್ಟ್ ಮಾಡಲಾಗಿದೆ. ಹಾಗೆಯೇ ಗ್ರಾಮವನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಲಾಗಿದೆ. ಈ ಗ್ರಾಮದಲ್ಲಿ ಸಾರ್ವಜನಿಕ ಸಂಚಾರ ಹಾಗೂ ಓಡಾಟವನ್ನ ಸಂಪೂರ್ಣವಾಗಿ ಜಿಲ್ಲಾಡಳಿತ ನಿಷೇಧಿಸಿದೆ.
ಓದಿ:ಗಣಿನಾಡಿನಲ್ಲಿ ಒಂದೇ ದಿನ 23 ಪಾಸಿಟಿವ್.. 94ರಲ್ಲಿ ಈವರೆಗೂ 49 ಮಂದಿ ಡಿಸ್ಚಾರ್ಜ್!!
ಪ್ರೈಮರಿ ಕಾಂಟಾಕ್ಟ್ ಹೊಂದಿರುವ ಈ ಯುವತಿಯ ತಂದೆ ಹರಗಿನಡೋಣಿ ಗ್ರಾಮದ ಸುತ್ತಮುತ್ತಲೂ ಕೃಷಿ ಇಲಾಖೆಯು ಜಿಲ್ಲಾ ಪಂಚಾಯಿತಿಯ ಎನ್ ಎಂಆರ್ ಇಜಿ ಯೋಜನೆಯಡಿ ಕೈಗೊಂಡಿದ್ದ ಬದು ನಿರ್ಮಾಣ ಹಾಗೂ ಕೃಷಿ ಹೊಂಡ ಕಾರ್ಯದಲ್ಲಿ ತೊಡಗಿಕೊಂಡಿದ್ದ, ನೂರಾರು ಕೂಲಿ ಕಾರ್ಮಿಕರ ಹಾಜರಾತಿ ಪಡೆಯಲು ದಿನಾಲೂ ಕಾರ್ಯಕ್ಷೇತ್ರಕ್ಕೆ ಭೇಟಿ ಕೊಡುತ್ತಿದ್ದರು. ಹೀಗಾಗಿ, ಆ ಎಲ್ಲ ಕೂಲಿ ಕಾರ್ಮಿಕರನ್ನೂ ಕೂಡ ಸಾಂಸ್ಥಿಕ ಕ್ವಾರಂಟೈನ್ ಮಾಡಬೇಕಾಗುತ್ತೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.