ವಿಜಯನಗರ: ಹೊಸಪೇಟೆ ಎಸ್ಟಿ ಕಾಲೇಜು ಹಾಸ್ಟೆಲ್ನಲ್ಲಿ ನಿನ್ನೆ ರಾತ್ರಿ ಚಿಕನ್ ಊಟ ಮಾಡಿದ್ದ ವಿದ್ಯಾರ್ಥಿನಿಯರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ಘಟನೆ ಕುರಿತು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಮಾಹಿತಿ ನೀಡಿದ್ದಾರೆ. "ಜಂಬುನಾಥ ರಸ್ತೆಯಲ್ಲಿರೋ ಬಾಲಕಿಯರ ಮೆಟ್ರಿಕ್ ಎಸ್ಟಿ ಹಾಸ್ಟೆಲ್ನಲ್ಲಿ ಒಟ್ಟು 148 ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ 17 ಸಸ್ಯಹಾರಿ ಮಕ್ಕಳಿದ್ದು, ಇವರನ್ನು ಬಿಟ್ಟು ಉಳಿದ ಮಕ್ಕಳೆಲ್ಲಾ ನಿನ್ನೆ ರಾತ್ರಿ 7.30 ರಿಂದ 8 ಗಂಟೆ ಒಳ ಸಮಯದಲ್ಲಿ ಚಿಕನ್ ಊಟ ಮಾಡಿದ್ದಾರೆ. ಊಟ ಮಾಡಿದ್ದ ಮಕ್ಕಳಲ್ಲಿ ರಾತ್ರಿ 2 ಗಂಟೆ ನಂತರ ಹೊಟ್ಟೆ ನೋವು, ಜ್ವರ, ಭೇದಿ ಶುರುವಾಗಿದೆ. ತಕ್ಷಣವೇ ವಸತಿ ನಿಲಯದ ವಾರ್ಡ್ನ್ ಸರಕಾರಿ ಆಸ್ಪತ್ರೆಗೆ 28 ಮಕ್ಕಳನ್ನು ದಾಖಲು ಮಾಡಿದ್ದಾರೆ.
ದಾಖಲಾಗಿರುವ ಎಲ್ಲ ವಿದ್ಯಾರ್ಥಿಗಳಿಗೂ ಚಿಕಿತ್ಸೆ ನೀಡಲಾಗುತ್ತಿದೆ. 28 ಮಕ್ಕಳಲ್ಲಿ 4-5 ಮಕ್ಕಳು ಭಯದಿಂದ ಅವರ ಆರೋಗ್ಯ ಸ್ಥಿತಿ ಸ್ವಲ್ಪ ಜಾಸ್ತಿ ಹದಗೆಟ್ಟಿದೆ. ಆದರೆ, ಎಲ್ಲ ಮಕ್ಕಳ ಆರೋಗ್ಯ ಸ್ಥಿರವಾಗಿದೆ. ಇಲ್ಲಿ ದಾಖಲಾಗಿರುವ ವಿದ್ಯಾರ್ಥಿಗಳಿಗಾಗಿ ಬೇರೆ ಕೊಠಡಿಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಮತ್ತೊಂದು ಕಡೆ ಹಾಸ್ಟೆಲ್ನಲ್ಲಿ ಉಳಿದಿರುವ ವಿದ್ಯಾರ್ಥಿಗಳ ಆರೋಗ್ಯದ ಮುನ್ನಚ್ಚೆರಿಕಗಾಗಿ ಅಲ್ಲಿ ಕೂಡ ವೈದ್ಯರ ಒಂದು ತಂಡವನ್ನು ನಿಯೋಜಿಸಲಾಗಿದೆ. ತುರ್ತು ವ್ಯವಸ್ಥೆಗಾಗಿ ವಾಹನವನ್ನು ಸನ್ನದ್ಧವಾಗಿಡಲಾಗಿದೆ. ಘಟನೆಗೆ ಮಕ್ಕಳಲ್ಲಿ ವಿಚಾರಿಸಿದಾಗ ಎಂದಿಗಿಂತ ನಿನ್ನೆ ಪದಾರ್ಥವು ಅತೀ ಖಾರದಿಂದ ಕೂಡಿತ್ತು ಎಂದಿದ್ದಾರೆ.
ಆದರೆ, ನಾವು ನಿಖರವಾದ ಕಾರಣಕ್ಕೆ ಆಗಿ ನೀರು, ಚಿಕನ್, ಮತ್ತು ಮಕ್ಕಳ ರಕ್ತದ ಸ್ಯಾಂಪಲ್ ತೆಗೆದುಕೊಂಡಿದ್ದು, ಈ ಸಂಬಂಧ ಪರೀಕ್ಷೆ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳಿಗಾಗಿ 24 ಗಂಟೆಯು ಚಿಕಿತ್ಸೆ ನೀಡುವಂತೆ ಮತ್ತು ಪ್ರತಿ ಗಂಟೆಗೊಮ್ಮೆ ಅಪಡೇಟ್ ಕೊಡುವಂತೆ ಸೂಚಿಸಲಾಗಿದೆ. ಸದ್ಯ ಭೇದಿಯಿಂದ ಮಕ್ಕಳಲ್ಲಿ ವೀಕ್ನೆಸ್ ಕಂಡು ಬಂದಿದೆ. ಅಸ್ವಸ್ಥಗೊಂಡಿರುವವರು, ಸಂಪೂರ್ಣವಾಗಿ ಗುಣಮುಖವಾಗಲು ಕನಿಷ್ಠ ಎರಡು ದಿನಗಳಾದರೂ ಬೇಕು. ಭಯಪಡುವಂತ ಪರಿಸ್ಥಿತಿ ಇಲ್ಲ. ಎಲ್ಲ ಮಕ್ಕಳ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ ಎಂದು ತಿಳಿಸಿದರು.
ಆಸ್ಪತ್ರೆಗೆ ಡಿಸಿ ಭೇಟಿ, ಪರಿಶೀಲನೆ: ಇನ್ನು ಆಸ್ಪತ್ರೆಗೆ ಮಾಹಿತಿ ತಿಳಿದ ತಕ್ಷಣವೇ ಜಿಲ್ಲಾಧಿಕಾರಿ ಎಂ.ಎಸ್‌ದಿವಾಕರ್, ಸಿಇಒ ಸದಾಶಿವ ಪ್ರಭು, ಡಿಎಚ್ಒ ಡಾ. ಸಲೀಂ, ಎಸಿ ಅಕ್ರಂಪಾಷಾ, ತಹಶಿಲ್ದಾರ್ ವಿಶ್ವಜೀತ್ ಮೆಹತಾ ಭೇಟಿ ನೀಡಿ ಪರಿಶೀಲನೆ ನಡೆಸಿ, ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದರು.
ಮಕ್ಕಳ ಆರೋಗ್ಯದ ಬಗ್ಗೆ ಡಿಎಚ್ಒ ಹೇಳಿದ್ದಿಷ್ಟು: ಇನ್ನು ಈ ಕುರಿತು ಡಿಎಚ್ಒ ಡಾ. ಸಲೀಂ ಮಾಹಿತಿ ನೀಡಿದ್ದಾರೆ. "ಪೋಸ್ಟ್ ಮೆಟ್ರಿಕ್ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯರಲ್ಲಿ ವಾಂತಿ ಭೇದಿ ಪ್ರಕರಣ ಕಂಡು ಬಂದಿದ್ದು, ಹೊಸಪೇಟೆಯ ಸರಕಾರಿ ಆಸ್ಪತ್ರೆಯಲ್ಲಿ 28 ವಿದ್ಯಾರ್ಥಿನಿಯರು ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರೆಲ್ಲ ಆರೋಗ್ಯ ತೀವ್ರ ತರವಾಗಿಯೇನು ಹದಗೆಟ್ಟಿಲ್ಲ, ಸಾಧರಣ ಮತ್ತು ಸ್ವಲ್ಪ ಹೆಚ್ಚು ಆರೋಗ್ಯ ಸಮಸ್ಯೆ ಲಕ್ಷಣ ಇರುವವರು ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರ ಸ್ಥಿತಿ ಸಹಜ ಸ್ಥಿತಿಯಲ್ಲಿದೆ. ಯಾವುದೇ ತರಹದ ತೊಂದರೆ ಇಲ್ಲ. ಹಿಂದಿನ ದಿನ ಚಿಕನ್ ತಿಂದ ನಂತರ ಈ ಲಕ್ಷಣಗಳು ಪ್ರಾರಂಭವಾಗಿದೆ ಎಂದಿದ್ದಾರೆ. ಆದರೆ ಚಿಕನ್, ನೀರಿನಿಂದ ಆಗಿದೆಯಾ ಎಂದು ತನಿಖೆ ನಡೆಯಬೇಕಿದೆ. ಸದ್ಯ ಎಲ್ಲರ ಸ್ಥಿತಿ ಸ್ಥಿರವಾಗಿದ್ದು ಯಾವುದೇ ಭಯಪಡಬೇಕಿಲ್ಲ" ಎಂದರು.
ಇದನ್ನೂ ಓದಿ: ಮರುಕಳಿಸಿದ ಪ್ರಕರಣ: ಟೊಮೆಟೊ ಬಾತ್ ಸೇವಿಸಿ ಮೊರಾರ್ಜಿ ಶಾಲೆಯ 7 ವಿದ್ಯಾರ್ಥಿಗಳು ಅಸ್ವಸ್ಥ