ಬಳ್ಳಾರಿ: ನಗರದ ವಿಮ್ಸ್ನಿಂದ 13 ವೈದ್ಯರು ಮತ್ತು ಇತರ 7 ಜನ ಆರೋಗ್ಯ ಸಹಾಯಕರು ಕೊರೊನಾ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಆಗಿದ್ದಾರೆ. ವಿಮ್ಸ್ ಟೀಚರ್ಸ್ ಅಸೋಸಿಯೇಷನ್‌ನಿಂದ ಇವರೆಲ್ಲರಿಗೂ ಹೂ, ಹಣ್ಣು ಕೊಟ್ಟು ಬೀಳ್ಕೊಡಲಾಯಿತು.
ಅಸೋಸಿಯೇಷನ್ ಪ್ರೆಸಿಡೆಂಟ್ ಡಾ.ಶ್ಯಾಮಲಾ, ಸೆಕ್ರೆಟರಿ ಡಾ.ರಾಜಶೇಖರ್ ಗೌಡ ಮತ್ತು ಡಾ.ರಾಮರಾಜು, ಜೂನಿಯರ್ ಡಾಕ್ಟರ್ ಅಸೋಸಿಯೇಷನ್ನ ಡಾ. ನಿವೇದಿತಾ, ಕೋವಿಡ್ ನೋಡಲ್ ಅಧಿಕಾರಿ ಡಾ.ರಾಘವೇಂದ್ರ, ವೈದ್ಯರಾದ ಡಾ.ಪ್ರಶಾಂತ್, ಡಾ.ನಾರಾಯಣ ಶ್ರೀಹರಿ ಮತ್ತಿತರರು ಇದ್ದರು. ಡಾ.ಅಶ್ವಿನಿ ಕುಮಾರ್ ಸಿಂಗ್ ಎಲುಬು ಮತ್ತು ಕೀಲು ವಿಭಾಗದ ಪ್ರಾಧ್ಯಾಪಕರಾಗಿಯೂ ಜೊತೆಗೆ ಒಬ್ಬ ಕೋವಿಡ್ ಸೋಂಕಿತ ವ್ಯಕ್ತಿಯಾಗಿ ಅದರಿಂದ ಮುಕ್ತಿ ಹೊಂದಿ ತಮ್ಮ ಅನುಭವ ಹಂಚಿಕೊಂಡರು.
ಕೋವಿಡ್ ನೋಡಲ್ ಅಧಿಕಾರಿ ಡಾ.ರಾಘವೇಂದ್ರ ಮಾತನಾಡಿ, ಆರೋಗ್ಯ ಕಾಪಾಡುವುದು ಮತ್ತು ಕೋವಿಡ್ ನಿಯಂತ್ರಣ ಎರಡೂ ಜನರ ಕೈಯಲ್ಲಿದೆ. ಜನರು ಸಾಮಾಜಿಕ ಜವಾಬ್ದಾರಿ, ಅಂತರ, ಮಾಸ್ಕ್ ಧರಿಸಿ ಇದನ್ನು ತಡೆಗಟ್ಟಲು ಮುಂದಾಗಬೇಕು. ಬಳ್ಳಾರಿ ವಿಮ್ಸ್ ವೈದ್ಯರು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ಕೊಡುತ್ತ ತಮ್ಮೊಳಗೂ ಅದನ್ನು ಸೇರಿಸಿಕೊಂಡು ಹೋರಾಡಿ ಗೆದ್ದು ಬಂದಿದ್ದಾರೆ ಅವರಿಗೆ ಶುಭವಾಗಲಿ ಎಂದರು.