ಹೊಸಪೇಟೆ (ವಿಜಯನಗರ): ಏ. 11 ರಂದು ವಿಜಯನಗರ ಜಿಲ್ಲೆಯ ಕೊಟ್ಟೂರಿನ ಪಟ್ಟಣದಲ್ಲಿ ಮನೆಯೊಂದರಲ್ಲಿ ಮಾರಕಾಸ್ತ್ರಗಳನ್ನು ತೋರಿಸಿ 30 ಲಕ್ಷ ರೂ. ಕಳ್ಳತನ ಮಾಡಿದ್ದ 10 ಜನ ಆರೋಪಿಗಳನ್ನು ಬಂಧಿಸಿ,5.17 ಲಕ್ಷ ರೂ. ಹಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಂಗಳೂರಿನ ಎಸ್.ಸುದರ್ಶನ್, ಬಿ.ಜೆ.ಚೇತನ್, ಎಸ್.ಮಂಜೇಶ್, ಮಹದೇವ, ಎನ್.ಚಂದ್ರಶೇಖರ್, ಕೃಷ್ಣ, ಜಿ.ಶ್ರೀನಿವಾಸ, ಪಿ.ಕಿರಣ್ ಹಾಗೂ ಹಗರಿಬೊಮ್ಮನಹಳ್ಳಿ ಗೋಣಿಬಸಪ್ಪ, ವಿನಾಯಕ ಎಂಬುವವರನ್ನು ಬಂಧಿಸಿ, 5 ಲಕ್ಷ ರೂ. ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಆರು ಜನ ಆರೋಪಿಗಳು ತಲೆ ಮರೆಸಿಕೊಂಡಿದ್ದು, ಅವರ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಮಾಹಿತಿ ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ:
ಏ. 11 ರಂದು ಕೊಟ್ಟೂರು ಪಟ್ಟಣದ 7ನೇ ವಾರ್ಡ್ ನ ಬಸವೇಶ್ವರ ನಗರದ ಏರಿಯಾದ ಮಲ್ಲೇಶ ಹುಲುಮನಿ ಎಂಬುವರ ಮನೆಯನ್ನು ಕಳ್ಳತನ ಮಾಡಲಾಗಿತ್ತು. ಆರೋಪಿತರ ಪತ್ತೆಗಾಗಿ ಪೊಲೀಸ್ ಅಧಿಕಾರಿ ಹಾಲಮೂರ್ತಿ ರಾವ್ ಅವರ ನೇತೃತ್ವದಲ್ಲಿ ಕೊಟ್ಟೂರಿನ ಸಿಪಿಐ ಎಚ್.ದೊಡ್ಡaಣ್ಣ, ಪಿಎಸ್ ಐ ನಾಗಪ್ಪ ಅವರ ತಂಡವನ್ನು ರಚನೆ ಮಾಡಲಾಗಿತ್ತು.ಏಳು ದಿನದಲ್ಲಿ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.