ಹೊಸಪೇಟೆ: ನಗರದ ಒಳಾಂಗಣ ಕ್ರೀಡಾಂಗಣದ ಆವರಣದಲ್ಲಿ 2019-20ನೇ ಸಾಲಿನ ಡಿ.ಎಂ.ಎಫ್ ಯೋಜನೆಯಡಿ ಮಂಜೂರಾದ 1.44 ಕೋಟಿ ರೂ.ವೆಚ್ಚದ ಕಾಮಗಾರಿಗಳ ಭೂಮಿ ಪೂಜೆಯನ್ನು ಹುಡಾ ಅಧ್ಯಕ್ಷ ಅಶೋಕ್ ಜೀರೆ ನೆರವೇರಿಸಿದರು.
24.26 ಲಕ್ಷ ರೂ. ವೆಚ್ಚದಲ್ಲಿ ಒಳಾಂಗಣ ಬ್ಯಾಟ್ಮಿಂಟನ್ ಕ್ರೀಡಾಂಗಣದ ನವೀಕರಣ ಮತ್ತು ದುರಸ್ತಿ, 15.26 ಲಕ್ಷ ರೂ. ವೆಚ್ಚದಲ್ಲಿ ಒಳಾಂಗಣ ಈಜುಕೊಳದ ನವೀಕರಣ ಮತ್ತು ದುರಸ್ತಿ, 17.94 ಲಕ್ಷ ರೂ. ವೆಚ್ಚದಲ್ಲಿ ಸಭಾಂಗಣ ನವೀಕರಣ ಮತ್ತು ದುರಸ್ತಿ, ಸ್ಕೇಟಿಂಗ್ ಅಂಕಣ ನಿರ್ಮಾಣ ಕಾಮಗಾರಿ 86.54 ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಈ ಕಾಮಗಾರಿಗಳ ಜವಾಬ್ದಾರಿಯನ್ನು ಬಳ್ಳಾರಿ ನಿರ್ಮಿತಿ ಕೇಂದ್ರ ವಹಿಸಿಕೊಂಡಿದೆ.
ಇದೇ ಸಂದರ್ಭದಲ್ಲಿ ಹುಡಾ ಅಧ್ಯಕ್ಷ ಅಶೋಕ ಜೀರೆ ಮಾತನಾಡಿ, ಸಚಿವರ ಶ್ರಮದಿಂದ ತಾಲ್ಲೂಕಿನ ಒಳಾಂಗಣ ಕ್ರೀಡಾಂಗಣ ಅಭಿವೃದ್ಧಿ ಆಗುತ್ತಿದ್ದು, ಕ್ರೀಡಾಸಕ್ತರ ಬೇಡಿಕೆಯಂತೆ ಸ್ಕೇಟಿಂಗ್ ಅಂಕಣ ಕೂಡ ನಿರ್ಮಾಣವಾಗುತ್ತಿರುವುದು ಸಂತಸ ತಂದಿದೆ ಎಂದರು. ಸಚಿವರ ಆಪ್ತ ಸಹಾಯಕ ಧರ್ಮೇಂದ್ರ ಸಿಂಗ್, ಮುಖಂಡರಾದ ಅಯ್ಯಾಳಿ ತಿಮ್ಮಪ್ಪ, ಕವಿತಾ ಈಶ್ವರ ಸಿಂಗ್, ಸಂದೀಪ್ ಸಿಂಗ್ ಇನ್ನಿತರರಿದ್ದರು.