ಚಿಕ್ಕೋಡಿ: ಕಳೆದ 15 ದಿನಗಳಿಂದ ಕೃಷ್ಣಾ ನದಿ ಪ್ರವಾಹದಲ್ಲಿ ಮುಳುಗಡೆಯಾಗಿದ್ದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರು ಗ್ರಾಮದ ಶ್ರೀ ವೀರಭದ್ರ ದೇವಸ್ಥಾನದಲ್ಲಿ ಈಗ ನೀರು ಕಡಿಮೆಯಾಗಿದ್ದು, ದೇವರ ದರ್ಶನ ಪಡೆಯಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ.
ಕಳೆದೆರಡು ದಿನಗಳಿಂದ ದೇವಸ್ಥಾನವನ್ನು ಶುಚಿಗೊಳಿಸಿ ಭಕ್ತರಿಗೆ ಅನುಕೂಲ ಮಾಡಿಕೊಡಲಾಗಿದೆ. ಎಂದಿನಂತೆ ಪೂಜಾ ಕೈಂಕರ್ಯ, ಅಭಿಷೇಕ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದಿವೆ. ಶ್ರಾವಣ ಮಾಸದಲ್ಲಿ ದೇವರ ದರ್ಶನ ಪಡೆದು ಪುನೀತರಾಗಬೇಕು ಎಂದು ಹವಣಿಸುತ್ತಿದ್ದ ಭಕ್ತರಿಗೆ ದೇವಸ್ಥಾನವೇ ಜಲಾವೃತವಾಗಿದ್ದರಿಂದ ನಿರಾಸೆಯಾಗಿತ್ತು. ಕೊನೆಗೂ ಶ್ರಾವಣ ಮಾಸದ ಕೊನೆ ವಾರದಲ್ಲಿ ಪ್ರವಾಹ ಇಳಿದು ವೀರಭದ್ರ ದೇವರ ದರ್ಶನ ಭಾಗ್ಯ ಲಭಿಸಿದ್ದರಿಂದ ಭಕ್ತರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ. ಬಂದ ಭಕ್ತರಿಗೆ ಶ್ರೀ ಕಾಡಸಿದ್ದೇಶ್ವರ ಮಠದಿಂದ ಅನ್ನ ದಾಸೋಹ ವ್ಯವಸ್ಥೆ ಏರ್ಪಡಿಸಲಾಗಿದೆ.
ಇನ್ನು ಸುಕ್ಷೇತ್ರ ಯಡೂರ ಗ್ರಾಮಕ್ಕೆ ತೆರಳುವ ಕಲ್ಲೋಳ-ಯಡೂರು, ಬಾಂದಾರ ಮತ್ತು ಅಂಕಲಿ-ಮಾಂಜರಿ ಸೇತುವೆಯ ಸಂಚಾರ ಪ್ರಾರಂಭವಾಗಿದ್ದರಿಂದ 15-20 ದಿನಗಳ ನಂತರ ಭಕ್ತರಿಗೆ ದೇವಸ್ಥಾನಕ್ಕೆ ಭೇಟಿ ನೀಡಲು ಅನೂಕೂಲವಾಗಿದೆ. ಮಹಾರಾಷ್ಟ್ರದ ಸುಕ್ಷೇತ್ರ ನರಸಿಂಹವಾಡಿಯ ದತ್ತ ದೇವಸ್ಥಾನ, ರಾಯಬಾಗ ತಾಲೂಕಿನ ಸುಗಂಧಾದೇವಿ ದೇವಸ್ಥಾನ, ತಾಲೂಕಿನ ಕಲ್ಲೋಳ ಗ್ರಾಮದ ನದಿ ತೀರದಲ್ಲಿರುವ ದತ್ತ ದೇವಸ್ಥಾನ, ಗಣಪತಿ ದೇವಸ್ಥಾನ ಸೇರಿದಂತೆ ಜಲಾವೃತಗೊಂಡಿದ್ದ ಎಲ್ಲಾ ದೇವಸ್ಥಾನಗಳು ಭಕ್ತರಿಗೆ ದರ್ಶನಕ್ಕೆ ಈಗ ಮುಕ್ತವಾಗಿವೆ.