ಬೆಳಗಾವಿ: ಬೈಲಹೊಂಗಲ ತಾಲೂಕಿನ ಪಿಡಿಓ ಮಮತಾಜ್ ಛಬ್ಬಿ ಎಂಬುವವರು 'ಎದೆ ಸೀಳಿದರೆ ನಾಲ್ಕು ಅಕ್ಷರ ಇಲ್ಲ' ಎಂದು ಕೂಲಿ ಕಾರ್ಮಿಕರೊಂದಿಗೆ ಅಸಭ್ಯವಾಗಿ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.
ತಾಲೂಕಿನ ಸಂಗೊಳ್ಳಿ ಗ್ರಾಮ ಗ್ರಾಮ ಪಂಚಾಯತ್ ವ್ಯಾಪ್ತಿಯ ಗರಜೂರ ಗ್ರಾಮದ ಕೆರೆಯೊಂದರಲ್ಲಿ ನರೇಗಾ ಯೋಜನೆಯಡಿ ಕಾಮಗಾರಿ ಮಾಡುವ ವೇಳೆ ಈ ಘಟನೆ ನಡೆದಿದೆ. ಕೆರೆಯೊಂದರಲ್ಲಿ ನರೇಗಾ ಯೋಜನೆಯಡಿ ನಡೆಯುತ್ತಿರುವ ಈ ಕಾಮಗಾರಿಗೆ ಪಿಡಿಓ ಮಮತಾಜ್ ಉದ್ಯೋಗ ಕಾರ್ಡ್ ಇಲ್ಲದ ವ್ಯಕ್ತಿಗೆ ಉದ್ಯೋಗ ಮಿತ್ರ ಮಾಡಿಕೊಟ್ಟಿದ್ದಾರೆ ಎಂಬ ಆರೋಪವಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ನೀನು ಎಷ್ಟು ಕಲಿತಿರುವೆ ಎಂಬುದು ಗೊತ್ತಿದೆ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ.
ನರೇಗಾ ಕಾಮಗಾರಿ ನಡೆಯುವ ಸ್ಥಳಕ್ಕೆ ಆಗಮಿಸಿದ ಪಿಡಿಓ, ಕೂಲಿ ಕಾರ್ಮಿಕರಿಗೆ ಬುದ್ಧಿ ಹೇಳುವುದನ್ನು ಬಿಟ್ಟು ಕಾರ್ಮಿಕರ ಮೇಲೆಯೇ ದಬ್ಬಾಳಿಕೆ ನಡೆಸಿದ್ದಾರೆ. ಈ ವೇಳೆ ಕಾರ್ಮಿಕನೊಬ್ಬ ಜೆಸಿಬಿ ಮೂಲಕ ಏಕೆ ಕಾಮಗಾರಿ ಮಾಡಿಸುತ್ತೀರಿ ಎಂದು ಪ್ರಶ್ನೆ ಮಾಡಿದಾಗ ಯುವಕನಿಗೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ ಎಂದು ನಿಂದಿಸಿದ್ದಾರೆ ಎನ್ನಲಾಗುತ್ತಿದೆ. ಮಿನಿಸ್ಟರ್ ಲೇವಲ್ಗೆ ಹೋದರು ನನ್ನನ್ನು ಏನು ಮಾಡಲು ಸಾಧ್ಯವಿಲ್ಲ ಎಂದು ಕಾರ್ಮಿಕರಿಗೆ ಬೆದರಿಕೆ ಹಾಕಿ ನಾಲ್ವರನ್ನು ಮರಳಿ ಯಾವುದೇ ಕಾರಣಕ್ಕೂ ನರೇಗಾ ಕೆಲಸಕ್ಕೆ ತೆಗೆದುಕೊಳ್ಳಬೇಡಿ ಎಂದು ಆವಾಜ್ ಹಾಕಿದ್ದಾರೆ ಎಂದು ಆರೋಪಿ ಕೇಳಿ ಬಂದಿದೆ. ಈ ಪಿಡಿಓ ಕಿರುಕುಳ ತಾಳಲಾರದೆ ಗರಜೂರ ಗ್ರಾಮದ ವಾಟರ್ಮ್ಯಾನ್ ಕೆಲಸ ಬಿಟ್ಟಿದ್ದಾರೆ ಎನ್ನಲಾಗಿದೆ.