ಬೆಂಗಳೂರು/ಬೆಳಗಾವಿ: ಬೆಳಗಾವಿಯಲ್ಲಿ ಪ್ರಸಕ್ತ ಸಾಲಿನ ವಿಧಾನಮಂಡಲದ ಚಳಿಗಾಲದ ಅಧಿವೇಶನಕ್ಕೆ ದಿನಗಣನೆ ಆರಂಭವಾಗಿದ್ದು, ಸಿದ್ಧತಾ ಕಾರ್ಯ ಭರದಿಂದ ಸಾಗಿದೆ. ಬೆಂಗಳೂರಿನಿಂದ ಸಾಕಷ್ಟು ಕಚೇರಿಗಳು ಬೆಳಗಾವಿಯತ್ತ ಸ್ಥಳಾಂತರಗೊಳ್ಳುತ್ತಿವೆ. ಶುಕ್ರವಾರ ಸಂಜೆಯ ವೇಳೆಗೆ ಬಹುತೇಕ ಎಲ್ಲಾ ಕಚೇರಿಗಳು ಬೆಳಗಾವಿಯಲ್ಲಿ ಇರಲಿವೆ. ರಾಜ್ಯದ ಶಕ್ತಿಕೇಂದ್ರ ಬೆಂಗಳೂರು ಸಂಪೂರ್ಣವಾಗಿ ಬೆಳಗಾವಿಗೆ ವರ್ಗಾವಣೆ ಆಗಲಿದೆ. ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪರಿಶೀಲಿಸಿದ್ದು, ಯಾವುದೇ ಲೋಪ ಆಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಡಳಿತದಿಂದ ಕೈಗೊಂಡಿರುವ ಪೂರ್ವಸಿದ್ಧತೆಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿ ಪಿ. ಹೇಮಲತಾ ಕೂಡಾ ಪರಿಶೀಲಿಸಿದ್ದಾರೆ. ಸುವರ್ಣ ಸೌಧಕ್ಕೆ ಭೇಟಿ ನೀಡಿದ ಅವರು, ವಿವಿಧ ಕೊಠಡಿಗಳು, ಬ್ಯಾಂಕ್ವೆಟ್ ಹಾಲ್, ಸಭಾಂಗಣಗಳನ್ನು ವೀಕ್ಷಿಸಿ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಪೀಠೋಪಕರಣ, ಧ್ವನಿ, ಅಂತರ್ಜಾಲ, ಕುಡಿಯುವ ನೀರು, ಸ್ವಚ್ಛತೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕಲಾಪ ಆರಂಭಗೊಂಡ ಬಳಿಕ ಯಾವುದೇ ದುರಸ್ತಿ ಮತ್ತಿತರ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಮುಂಚಿತವಾಗಿಯೇ ಎಲ್ಲ ಕೆಲಸಗಳನ್ನೂ ಪೂರ್ಣಗೊಳಿಸಬೇಕು ಎಂದು ಅವರು ಕಟ್ಟುನಿಟ್ಟಾಗಿ ತಿಳಿಸಿದ್ದಾರೆ.
ಆಡಳಿತದಲ್ಲಿ ಇ-ಆಫೀಸ್ ವ್ಯವಸ್ಥೆ ಅಳವಡಿಸಿಕೊಂಡಿರುವುದರಿಂದ ಕೇಸ್ವ್ಯಾನ್ ಹಾಗೂ ಬಿಎಸ್‍ಎನ್‍ಎಲ್‌ನಿಂದ ಸಮರ್ಪಕ ಅಂತರ್ಜಾಲ ಸಂಪರ್ಕ ಒದಗಿಸಬೇಕು ಎಂದು ನಿರ್ದೇಶನ ನೀಡಿರುವ ಅವರು, ಪ್ರತಿದಿನ ವಿಡಿಯೋ ಕಾನ್ಫರೆನ್ಸ್‌ಗಳು ನಡೆಯಲಿರುವುದರಿಂದ ಹೆಚ್ಚಿನ ಸಾಮರ್ಥ್ಯದ ಬ್ರಾಡ್‍ಬ್ಯಾಂಡ್ ಸಂಪರ್ಕ ಕಲ್ಪಿಸಬೇಕು. ಸುವರ್ಣ ಸೌಧದಲ್ಲಿರುವ ಕೊಠಡಿಗಳು, ಸಭಾಂಗಣ, ಬ್ಯಾಂಕ್ವೆಟ್ ಹಾಲ್ ಸೇರಿದಂತೆ ಎಲ್ಲ ಕಡೆಗಳಲ್ಲಿ ಹಾಗೂ ಆವರಣದ ಹೊರಭಾಗದಲ್ಲಿ ಕೂಡ ಪ್ರತಿದಿನ ಸ್ವಚ್ಛತಾಕಾರ್ಯವನ್ನು ನಿಯಮಿತವಾಗಿ ನಡೆಸಬೇಕು. ಶೌಚಾಲಯಗಳ ನಿರ್ವಹಣೆ, ಅಗ್ನಿಶಾಮಕ ವ್ಯವಸ್ಥೆ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಅಧಿವೇಶನದ ಸಿದ್ಧತೆಗೆ ರಚಿಸಲಾಗಿರುವ ವಿವಿಧ ಉಪ ಸಮಿತಿಗಳ ಕಾರ್ಯಚಟುವಟಿಕೆಗಳು ಮತ್ತು ಕಾರ್ಯ ಪ್ರಗತಿ ಕುರಿತು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾಹಿತಿ ನೀಡಿದ್ದಾರೆ. ಸಚಿವರು, ಶಾಸಕರು, ಉನ್ನತ ಮಟ್ಟದ ಅಧಿಕಾರಿಗಳು, ಸಚಿವಾಲಯದ ಅಧಿಕಾರಿ/ಸಿಬ್ಬಂದಿಗೆ ವಸತಿ ಸೌಲಭ್ಯ ಹಂಚಿಕೆ ಕಾರ್ಯ ನಡೆಯುತ್ತಿದೆ. ಇದಲ್ಲದೇ ಸಾರಿಗೆ ಹಾಗೂ ಊಟೋಪಹಾರದ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಪ್ರತಿಭಟನೆಗಳ ನಡೆಯಲಿರುವುದರಿಂದ ಸುಗಮ ನಿರ್ವಹಣೆಗಾಗಿ ದೂರು ನಿರ್ವಹಣಾ ಸಮಿತಿ ರಚಿಸಲಾಗಿದೆ. ಉಪ ವಿಭಾಗಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳು ಸಮನ್ವಯತೆ ಸಾಧಿಸಲಿದ್ದಾರೆ ಎಂದು ತಿಳಿಸಿದರು.
ನಿಷೇಧಾಜ್ಞೆ ಜಾರಿ: ಸುವರ್ಣಸೌಧದ 1 ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್ ಆಯುಕ್ತ ಡಾ.ಎಂ.ಬಿ ಬೋರಲಿಂಗಯ್ಯ ಆದೇಶ ಹೊರಡಿಸಿದ್ದಾರೆ. ಡಿಸೆಂಬರ್ 12ರ ಬೆಳಗ್ಗೆ 10 ಗಂಟೆಯಿಂದ ಜನವರಿ 1ರ ಮಧ್ಯರಾತ್ರಿಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ. ಸೌಧದ ಎಡಬದಿಯಿಂದ ಟೊಯಟಾ ಶೋರೂಮ್‌ವರೆಗೆ ಮತ್ತು ಸುವರ್ಣಸೌಧದ ಬಲಬದಿಯಿಂದ ಹಲಗಾ ಗ್ರಾಮದವರೆಗೆ, ಅದರಂತೆ ಎದುರುಗಡೆ ಜೀನಗೌಡಾ ಆಸ್ಪತ್ರೆಯವರೆಗೆ 1 ಕಿ.ಮೀ ವ್ಯಾಪ್ತಿಯಲ್ಲಿ 5ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ ಅಥವಾ ಸಭೆ ಸಮಾರಂಭ ಏರ್ಪಡಿಸುವುದನ್ನು ನಿಷೇಧಿಸಲಾಗಿದೆ.
ಆರು ಮಸೂದೆಗಳನ್ನು ಈ ಅಧಿವೇಶನದಲ್ಲಿ ತರಲಾಗುತ್ತಿದೆ. ಇದರಲ್ಲಿ ಎರಡು ಮಸೂದೆಗಳನ್ನು ಈಗಾಗಲೇ ಮಂಡಿಸಲಾಗಿದೆ. ಅವುಗಳನ್ನು ಚರ್ಚಿಸಿ ಅಂಗೀಕರಿಸುವ ಪ್ರಕ್ರಿಯೆ ನಡೆಯಲಿದೆ. ಮತ್ತೆ ನಾಲ್ಕು ಹೊಸ ವಿಧೇಯಕಗಳು ಬಂದಿವೆ. ಬೇರೆ ಯಾವುದೇ ವಿಧೇಯಕ ಇದ್ದರೆ ಸರ್ಕಾರ ಅವುಗಳನ್ನು ಮಂಡಿಸಲಿದೆ. ಮೊದಲ ದಿನ ವಿಧಾನಸಭೆ ಉಪಾಧ್ಯಕ್ಷ ಆನಂದ ಮಾಮನಿ ಸೇರಿದಂತೆ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮವಿದೆ ಎಂದು ಸ್ಪೀಕರ್ ಕಾಗೇರಿ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಈ ಸರ್ಕಾರದ ಕೊನೆಯ ಅಧಿವೇಶನ: ಜನಪ್ರತಿನಿಧಿಗಳ ಹಾಜರಾತಿ ಕಡ್ಡಾಯ- ಕಾಗೇರಿ