ಬೆಳಗಾವಿ: ಕುಡುಕ ಗಂಡನ ಕಾಟಕ್ಕೆ ಬೇಸತ್ತ ಪತ್ನಿ ತನ್ನ ಮಗನೊಂದಿಗೆ ಸೇರಿ ಪತಿಯನ್ನೇ ಹತ್ಯೆ ಮಾಡಿರುವ ಘಟನೆ ಮೂಡಲಗಿ ತಾಲೂಕಿನ ಹಳ್ಳೂರು ಗ್ರಾಮದಲ್ಲಿ ನಡೆದಿದೆ. ಚಂದ್ರಕಾಂತ ಮಾವರಕರ್(42) ಕೊಲೆಯಾದ ವ್ಯಕ್ತಿ. ಸಾವಿತ್ರಿ ಮಾವರಕರ್, ಸುನೀಲ್ ಮಾವರಕರ್ ಕೊಲೆ ಮಾಡಿದ ತಾಯಿ ಹಾಗೂ ಮಗ ಎಂದು ಗುರುತಿಸಲಾಗಿದೆ. ನಿನ್ನೆ ಬೆಳಗಿನ ಜಾವ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಹಳ್ಳೂರು ಗ್ರಾಮದಲ್ಲಿ ಪ್ರತಿ 12 ವರ್ಷಕ್ಕೊಮ್ಮೆ ದ್ಯಾಮವ್ವ ಹಾಗೂ ಮಹಾಲಕ್ಷ್ಮೀ ದೇವಿ ಜಾತ್ರೆ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ವರ್ಷವೂ ಇಡೀ ಊರಿನಲ್ಲಿ ಎಲ್ಲರೂ ಸಂಭ್ರಮದಿಂದ ಜಾತ್ರೆಯಲ್ಲಿದ್ದರೆ, ಜಾತ್ರೆ ಇದೆ ಎಂದು ಕೊಲೆಯಾದ ಚಂದ್ರಕಾಂತ ಮದ್ಯ ಸೇವಿಸಿ ಪತ್ನಿ ಸಾವಿತ್ರಿ ಜತೆ ಜಗಳ ಮಾಡಿದ್ದಾನೆ. ಈ ವೇಳೆ ಪತ್ನಿ, ಮಗ ಹಾಗೂ ಪತಿಯ ಮಧ್ಯೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.
ಪತ್ನಿ ಸಾವಿತ್ರಿ ಹಾಗೂ ಮಗ ಸುನೀಲ್ ಕಬ್ಬಿಣದ ರಾಡ್ನಿಂದ ಜೋರಾಗಿ ಚಂದ್ರಕಾಂತ ತಲೆಗೆ ಹೊಡೆದಿದ್ದಾರೆ. ಬಳಿಕ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಚಂದ್ರಕಾಂತನನ್ನು ಸ್ಥಳೀಯರೆಲ್ಲಾ ಸೇರಿ ಮೂಡಲಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಿಸದೇ ನಿನ್ನೆ ಸಂಜೆ ಆಸ್ಪತ್ರೆಯಲ್ಲಿ ಚಂದ್ರಕಾಂತ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಮೂಡಲಗಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಮೂಡಲಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಕೊಲೆ ಕೇಸ್: 6 ಆರೋಪಿಗಳ ಬಂಧನ
ಹೊಸೂರ ಬಸವನ ಗಲ್ಲಿಯಲ್ಲಿ ಯುವಕ ಹತ್ಯೆ: ಮತ್ತೊಂದೆಡೆ ಬೆಳಗಾವಿಯ ಹೊಸೂರ ಬಸವನ ಗಲ್ಲಿಯಲ್ಲಿ ಭಾನುವಾರ ಯುವಕನನ್ನು ಹತ್ಯೆ ಮಾಡಲಾಗಿದೆ. ಮಿಲಿಂದ ಚಂದ್ರಕಾಂತ ಜಾಧವ (28) ಕೊಲೆಯಾದ ಯುವಕ. ಈತ ಕೂಲಿ ಕೆಲಸ ಮಾಡುತ್ತಿದ್ದ. ಆಸ್ತಿ ವಿಚಾರವಾಗಿ ಸಂಬಂಧಿಯೋರ್ವ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಈ ಸಂಬಂಧ ಆರೋಪಿ ಅಭಿಜಿತ್ ಜಾಧವ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಈಜಲು ಹೋಗಿದ್ದ ಬಾಲಕ ಸಾವು: ಈಜಲು ಹೋದ ಬಾಲಕನ ತಲೆಗೆ ಕಲ್ಲು ಬಡಿದು ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಿದ್ದನಭಾವಿ ಕೊಳ್ಳದಲ್ಲಿ ಸಂಭವಿಸಿದೆ. ಬೆಳಗಾವಿ ತಾಲೂಕಿನ ಮಾಸ್ತಮರ್ಡಿ ಗ್ರಾಮದ ಬಾಲಕ ಕೃಷ್ಣ ಬಸವರಾಜ ಹಣಬರ ಮೃತ ದುರ್ದೈವಿ. ಭಾನುವಾರ ಮಧ್ಯಾಹ್ನ 3.30 ರ ಸುಮಾರಿಗೆ ಮರಕಟ್ಟಿ ಕ್ರಾಸ್ ಹತ್ತಿರದ ಸಿದ್ದನಭಾವಿ ಕೊಳ್ಳದಲ್ಲಿ ಈಜಲು ಹೋಗಿದ್ದಾನೆ. ಈ ವೇಳೆ ತಲೆಗೆ ಕಲ್ಲು ಬಡಿದು ತೀವ್ರವಾಗಿ ಗಾಯಗೊಂಡಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಬೈಲಹೊಂಗಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.