ಬೆಳಗಾವಿ: ನಗರದಲ್ಲಿ ಅನಧಿಕೃತವಾಗಿ ಖಾಸಗಿ ಹೋಲ್‌ಸೇಲ್ ತರಕಾರಿ ಮಾರುಕಟ್ಟೆ ನಿರ್ಮಾಣದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಡಿಸಿ ಕಚೇರಿಯಲ್ಲಿ ವ್ಯಾಪಾರಿಗಳ ಸಭೆ ಕರೆದಿದ್ದರು.
ಈ ಸಭೆಯಲ್ಲಿ ಜಿಲ್ಲಾಧಿಕಾರಿ ಸಮ್ಮುಖದಲ್ಲೇ ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ ಹಾಗೂ ನೇಗಿಲಯೋಗಿ ರೈತ ಸಂಘಟನೆ ಅಧ್ಯಕ್ಷ ರವಿ ಪಾಟೀಲ್ ಮಧ್ಯೆ ವಾಗ್ವಾದ ನಡೆಯಿತು. ಈ ವೇಳೆ ಪೊಲೀಸರು ರವಿ ಪಾಟೀಲ್ ಅವರನ್ನು ಸಭೆಯಿಂದ ಹೊರಕಳುಹಿಸಿದರು.
ಬೆಳಗಾವಿಯ ಎಪಿಎಂಸಿ ತರಕಾರಿ ಮಾರುಕಟ್ಟೆಗೆ ಸೆಡ್ಡು ಹೊಡೆದು ಕೆಲವು ದಲ್ಲಾಳಿಗಳು ಖಾಸಗಿ ತರಕಾರಿ ಮಾರುಕಟ್ಟೆ ನಿರ್ಮಾಣ ಮಾಡಿಕೊಂಡು ವಹಿವಾಟು ಆರಂಭಿಸಿದ್ದಾರೆ. ಇದರಿಂದ ನಗರದ ಹೋಲ್‌ಸೇಲ್ ತರಕಾರಿ ವ್ಯಾಪಾರಸ್ಥರ ಎರಡು ಬಣಗಳ ಮಧ್ಯೆ ಕಿತ್ತಾಟ ನಡೆಯುತ್ತಿದೆ. ಹೀಗಾಗಿ ಡಿಸಿ ಎರಡು ಬಣಗಳ ವ್ಯಾಪಾರಿಗಳ ಸಭೆ ಕರೆದಿದ್ದರು. ಈ ಸಭೆಯಲ್ಲಿ ಎಪಿಎಂಸಿ ಹೋಲ್‌ಸೇಲ್ ತರಕಾರಿ ಮಾರುಕಟ್ಟೆಯ ವ್ಯಾಪಾರಸ್ಥರು ಹಾಗೂ ಜೈ ಕಿಸಾನ್ ಹೋಲ್‌ಸೇಲ್ ತರಕಾರಿ ಮಾರುಕಟ್ಟೆ ವ್ಯಾಪಾರಸ್ಥರು ಭಾಗಿಯಾಗಿದ್ದು,ಡಿಸಿ ಎರಡೂ ಬಣಗಳ ವಾದ ಆಲಿಸಿದರು.
ತನಿಖೆಯ ಭರವಸೆ: ಸಭೆಯ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜೈ ಕಿಸಾನ್ ಹೋಲ್‌ಸೇಲ್ ತರಕಾರಿ ಮಾರುಕಟ್ಟೆ ವಿರುದ್ಧ ಕೇಳಿ ಬರುತ್ತಿರುವ ಆರೋಪದ ಬಗ್ಗೆ ತನಿಖೆಗೆ ಅಧಿಕಾರಿಗಳ ನೇಮಕ ಮಾಡುತ್ತೇನೆ. ತನಿಖೆಗೆ ಒಂದು ತಿಂಗಳ ಸಮಯಾವಕಾಶ ಬೇಕು. ಖಾಸಗಿ ಮಾರುಕಟ್ಟೆಯ ಲೋಪಗಳ ವರದಿಯನ್ನು ರೈತರು ನೀಡಿದ್ದಾರೆ. ಇದನ್ನು ನಾನು ಪರಿಶೀಲನೆ ಮಾಡುತ್ತೇನೆ. ತನಿಖೆ ಮುಗಿಯುವವರೆಗೆ ಯಥಾಸ್ಥಿತಿ ಕಾಪಾಡಬೇಕು ಎಂದರು.
ಸಭೆಯಲ್ಲಿ ತೀರ್ಮಾನ ಕೈಗೊಳ್ಳದೇ ಅಧಿಕಾರಿಗಳು ಪಲಾಯನ ಮಾಡಿದ್ದಾರೆ. ಹೀಗಾಗಿ ನಮಗೆ ಅಸಮಾಧಾನ ಇದೆ ಎಂದು ಎಪಿಎಂಸಿ ಹೋಲ್‌ಸೇಲ್ ತರಕಾರಿ ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದರು.