ಬೆಳಗಾವಿ: ಕೊರೊನಾದಿಂದ ರಾಜ್ಯದ ಹಣಕಾಸು ಸ್ಥಿತಿ ತೀರಾ ಹದಗೆಟ್ಟಿದೆ. ದೇಶದ ಹಲವು ರಾಜ್ಯಗಳಿಗೆ ಸರ್ಕಾರಿ ನೌಕರರ ಸಂಬಳ ನೀಡಲು ಆಗುತ್ತಿಲ್ಲ. ಆದರೆ ಸಂದಿಗ್ಧ ಪರಿಸ್ಥಿತಿಯಲ್ಲೂ ನಾವು ಸರ್ಕಾರಿ ನೌಕರರಿಗೆ ಸಂಬಳ ನೀಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಜನಪ್ರತಿನಿಧಿಗಳ ಜೊತೆಗಿನ ಸಭೆ ಬಳಿಕ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಪರಿಣಾಮ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಇದು ಸುಧಾರಿಸಲು ಇನ್ನೂ ಎರಡು-ಮೂರು ತಿಂಗಳ ಸಮಯ ಹಿಡಿಯುತ್ತದೆ ಎಂದರು.
ಅತಿವೃಷ್ಟಿ ಹಿನ್ನೆಲೆಯಲ್ಲಿ ಬೆಳಗಾವಿ-ಧಾರವಾಡ ಜನಪ್ರತಿಧಿಗಳ ಸಭೆ ನಡೆಸಲಾಗಿದೆ. ಕಳೆದ ವರ್ಷದ ಪ್ರವಾಹದ ಪರಿಹಾರ ವಿತರಣೆ ಹಾಗೂ ಪ್ರಸ್ತುತ ಹಾನಿ ಬಗ್ಗೆ ಮಾಹಿತಿ ಪಡೆಯಲಾಗಿದೆ. ಬೆಂಗಳೂರಿಗೆ ತೆರಳಿ ಅಧಿಕಾರಿಗಳ ಸಭೆ ನಡೆಸಿ, ಬೆಳೆ ಹಾನಿ ಬಗ್ಗೆ ಸಮೀಕ್ಷೆಗೆ ಸೂಚನೆ ನೀಡಲಾಗುವುದು. ನಂತರ ವರದಿ ಸಿದ್ಧಪಡಿಸಿ ಕೇಂದ್ರಕ್ಕೆ ಪರಿಹಾರ ಕೋರಿ ಮನವಿ ಸಲ್ಲಿಸಲಾಗುವುದು ಎಂದರು.
ಈವರೆಗೆ ಅಂದಾಜು ಬೆಳೆಹಾನಿ ಬಗ್ಗೆ ಮಾಹಿತಿ ಇಲ್ಲ. ಸಮೀಕ್ಷೆ ನಡೆಸಿ ಸಮರ್ಪಕ ಮಾಹಿತಿ ಒದಗಿಸಲಾಗುವುದು ಎಂದರು.