ಅಥಣಿ: ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸ್ವ ಕ್ಷೇತ್ರವಾದ ತಾಲೂಕಿನ ಕೊಟ್ಟಲಗಿ ಗ್ರಾಮದಲ್ಲಿ ನೀರಿನ ಟ್ಯಾಂಕ್ ಶಿಥಿಲಾವಸ್ಥೆಗೆ ತಲುಪಿದೆ. ಹಾಗಾಗಿ ಇಲ್ಲಿನ ನೂರಾರು ಕುಟುಂಬಗಳು ಭಯದಲ್ಲೇ ಬದುಕುವಂತಾಗಿದೆ.
ಗ್ರಾಮದಲ್ಲಿ 15 ವರ್ಷಗಳ ಹಿಂದೆ ನಿರ್ಮಾಣವಾದ ಬೃಹತ್ ಗಾತ್ರದ ನೀರಿನ ಟ್ಯಾಂಕ್ ಕುಸಿಯುವ ಹಂತದಲ್ಲಿದೆ. ಈ ಕುರಿತಂತೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಏನೂ ಪ್ರಯೋಜನವಾಗಿಲ್ಲ. ಚಿಕ್ಕ ಚಿಕ್ಕ ಮಕ್ಕಳು ಅದರ ಕೆಳಗೆ ಆಟ ಆಡುತ್ತಾರೆ. ಏನಾದರೂ ಅನಾಹುತ ಆದ್ರೆ ಯಾರೂ ಹೊಣೆ ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ದೂರವಾಣಿ ಮೂಲಕ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಅಧಿಕಾರಿ ವೀರಣ್ಣ ವಾಲಿ ಅವರನ್ನು ಸಂಪರ್ಕಿಸಿದಾಗ, ಗ್ರಾಮದ ತುಂಬೆಲ್ಲ ನೀರು ಸರಬರಾಜು ಮಾಡುವ ಒಂದೇ ಟ್ಯಾಂಕ್ ಇರುವುದು. ಅದನ್ನೇ ತೆರವುಗೊಳಿಸಿದರೆ ಗ್ರಾಮಸ್ಥರಿಗೆ ನೀರಿನ ಅಭಾವ ಸೃಷ್ಟಿ ಆಗುತ್ತೆ. ಹೊಸ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಈಗಾಗಲೇ ಸರ್ಕಾರಕ್ಕೆ ನಾವು ಮನವಿ ಸಲ್ಲಿಸಿದ್ದೇವೆ. ಸದ್ಯದ ಮಟ್ಟಿಗೆ ಯಾವುದೇ ತೊಂದರೆ ಇಲ್ಲ, ಪಂಚಾಯತ್ ಅಧಿಕಾರಿಗಳಿಗೆ ಸರಿಯಾಗಿ ನಿರ್ವಹಣೆ ಮಾಡಲು ಸೂಚಿಸಿದ್ದೇನೆಂದು ಈಟಿವಿ ಭಾರತಕ್ಕೆ ತಿಳಿಸಿದರು.
ಒಟ್ಟಾರೆಯಾಗಿ ಗ್ರಾಮದ ಮದ್ಯದಲ್ಲಿರುವ ಗಜ ಗಾತ್ರದ ನೀರಿನ ಟ್ಯಾಂಕ್ನಿಂದಾ ಜನ ಭಯಭೀತರಾಗಿದ್ದಾರೆ. ಆದಷ್ಟು ಬೇಗ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕೆಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.