ಚಿಕ್ಕೋಡಿ: ಕಳೆದ ತಿಂಗಳು ಸುರಿದ ಧಾರಾಕಾರ ಮಳೆಯಿಂದಾಗಿ ಚಿಕ್ಕೋಡಿ ಉಪವಿಭಾಗದ ಕಬ್ಬಿನ ಗದ್ದೆಗಳಲ್ಲಿ ನೀರು ನಿಂತಿರುವ ಪರಿಣಾಮ ಕಟಾವಿಗೆ ಬಂದ ಕಬ್ಬು ನುರಿಸಲು ವಿಳಂಬವಾಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ.
ಈಗಾಗಲೇ ಹಿಂಗಾರು ಬಿತ್ತನೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಬಿತ್ತನೆ ಮಾಡಲು ಸಜ್ಜಾದ ರೈತರಿಗೆ ಕಳೆದ ತಿಂಗಳು ಸುರಿದ ಧಾರಾಕಾರ ಮಳೆಯಿಂದಾಗಿ ಗದ್ದೆಯಲ್ಲಿ ನಿಂತ ನೀರಿನಿಂದ ಕಬ್ಬು ಕಟಾವು ಮಾಡಲು ಸಾಧ್ಯವಾಗುತ್ತಿಲ್ಲ. ಪ್ರಸಕ್ತ ಸಾಲಿನಲ್ಲಿ ಕಬ್ಬು ಬೆಳೆಗಾರರಿಗೆ ಪ್ರವಾಹ ಮತ್ತು ಮಳೆಯ ಅಬ್ಬರದಿಂದಾಗಿ ಹಾನಿ ಅನುಭವಿಸುವ ಪ್ರಸಂಗ ಬಂದೊದಗಿದ್ದು ಹೊಲಗದ್ದೆಗಳು ಕೆರೆಗಳಾಂತಾಗಿವೆ.
ಚಿಕ್ಕೋಡಿ - ನಿಪ್ಪಾಣಿ ತಾಲೂಕಿನಲ್ಲಿ 42,828 ಹೆಕ್ಟೇರ್ ಕಬ್ಬು ಬೆಳೆಯಲಾಗಿದೆ. ಕಳೆದ ವರ್ಷ ಶೇ 35ರಷ್ಟು ಕಬ್ಬು ಬೆಳೆ ಪ್ರವಾಹದಿಂದ ಹಾಳಾಗಿದ್ದು, ಈ ಬಾರಿ ಹೆಚ್ಚಿನ ಪ್ರವಾಹ ಬರದಿದ್ದರೂ ಸಹಿತ ಕಳೆದ ತಿಂಗಳು ಸುರಿದ ಕುಂಭದ್ರೋಣ ಮಳೆಯಿಂದ ಹೊಲಗಳಲ್ಲಿ ನೀರು ನಿಂತ ಕಾರಣ ಕಬ್ಬು ಕಟಾವು ಮಾಡಲು ರೈತರಿಗೆ ತೊಂದರೆಯಾಗುತ್ತಿದೆ.
ಈಗ ಕಬ್ಬಿನ ಗದ್ದೆಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರು ನಿಂತಿರುವುದರಿಂದ ಕಟಾವು ವಿಳಂಬವಾಗುತ್ತಿದ್ದು, ಇದರಿಂದ ರೈತರ ಜೊತೆಗೆ ಕಾರ್ಖಾನೆ ಮಾಲೀಕರಿಗೂ ಸಹಿತ ಕಬ್ಬು ಕಟಾವು ಮಾಡಲು ಸಾಧ್ಯವಾಗುತ್ತಿಲ್ಲ.