ಬೆಳಗಾವಿ: ಸುಪ್ರೀಂಕೋರ್ಟ್ ಹಾಗೂ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದರೂ ಮಾಜಿ ಸಚಿವ ವಿನಯ್ ಕುಲಕರ್ಣಿ ಇಂದೂ ಸಹ ಜೈಲಲ್ಲೇ ಇರಬೇಕಾದ ಅನಿವಾರ್ಯತೆ ಇದೆ.
ಜಿ.ಪಂ ಸದಸ್ಯ ಯೋಗೇಶಗೌಡ ಕೊಲೆ ಪ್ರಕರಣದ ಸಾಕ್ಷಿನಾಶ ಕುರಿತಾಗಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಜನಪ್ರತಿನಿಧಿಗಳ ನ್ಯಾಯಾಲಯ ನಿನ್ನೆಯೇ ಜಾಮೀನು ಮಂಜೂರು ಮಾಡಿತ್ತು. ಆದರೆ ಆದೇಶ ಪ್ರತಿಯನ್ನು ವಿನಯ್ ಪರ ವಕೀಲರಿಗೆ ಬೈ ಹ್ಯಾಂಡ್ ನೀಡದೇ ಹಿಂಡಲಗಾ ಜೈಲಿಗೆ ಸ್ಪೀಡ್ ಪೋಸ್ಟ್ ಮಾಡಿದೆ. ಇಂದು ಸರ್ಕಾರಿ ರಜೆಯ ಕಾರಣ ನ್ಯಾಯಾಲಯದ ಆದೇಶ ಪ್ರತಿ ನಾಳೆ ಜೈಲು ಸಿಬ್ಬಂದಿ ಕೈಸೇರುವ ಸಾಧ್ಯತೆ ಇದೆ. ಅಲ್ಲದೇ ಜಾಮೀನಿನ ಶೂರಿಟಿಯ ಮುಚ್ಚಳಿಕೆ ಪತ್ರವನ್ನು ಸ್ಥಳೀಯ ನ್ಯಾಯಾಲಯಕ್ಕೆ ಸಲ್ಲಿಸಬೇಕಿದೆ. ಆದರೆ ನ್ಯಾಯಾಲಯಗಳಿಗೂ ಕೂಡ ಇಂದು ರಜೆ ಇದೆ. ಈ ಎರಡು ತಾಂತ್ರಿಕ ಕಾರಣದಿಂದಾಗಿ ಜಾಮೀನು ಸಿಕ್ಕರೂ ಅವರು ಜೈಲಲ್ಲೇ ಇರಬೇಕಿದೆ.
ವಿನಯ್ ಕುಲಕರ್ಣಿ ಇಂದು ಬಿಡುಗಡೆ ಆಗುವ ಸಾಧ್ಯತೆ ಹಿನ್ನೆಲೆಯಲ್ಲಿ ಹಿಂಡಲಗಾ ಜೈಲಿಗೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಜೈಲಿಗೆ ಆಗಮಿಸಿದ ಬೆಳಗಾವಿ ಗ್ರಾಮೀಣ ಠಾಣೆ ಪಿಐ ಸುನೀಲ್ ಕುಮಾರ್, ಜೈಲಾಧಿಕಾರಿ ನಂದೇಶ್ವರ ಜೊತೆಗೆ ಚರ್ಚಿಸಿದ್ದರು. ನ್ಯಾಯಾಲಯದ ಆದೇಶ ಪ್ರತಿ ಇಂದು ಸಿಗುವುದು ಅನುಮಾನ, ಭದ್ರತೆ ಹಿಂಪಡೆಯುವಂತೆ ಸಿಬ್ಬಂದಿ ಪೊಲೀಸರಿಗೆ ಸೂಚಿಸಿದ್ದಾರೆ. ಈ ಕಾರಣಕ್ಕೆ ಜೈಲಿಗೆ ನಿಯೋಜಿಸಿದ್ದ ಪೊಲೀಸ್ ಭದ್ರತೆ ವಾಪಸ್ ಪಡೆಯಲಾಯಿತು.