ಬೆಳಗಾವಿ : ಜಿಲ್ಲೆಯ ಕಿತ್ತೂರಿನಲ್ಲಿ ನ.7ರಂದು ಮಾಜಿ ಸಚಿವ ವಿನಯ ಕುಲಕರ್ಣಿಯವರ ಜನ್ಮದಿನವನ್ನು ಅವರ ಅಭಿಮಾನಿ ಬಳಗ ಆಯೋಜಿಸಿದ್ದು, ಈ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಹಾಗಾಗಿ ಸುಮಾರು 50 ಸಾವಿರ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.
ಎಐಸಿಸಿ ಅಧ್ಯಕ್ಷ ಖರ್ಗೆ ಅವರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಚಿತ್ರ ನಟ ದರ್ಶನ್ ಸೇರಿ ಅನೇಕರು ಆಗಮಿಸಲಿದ್ದಾರೆ. ಇದು ಪಕ್ಷಾತೀತ ಕಾರ್ಯಕ್ರಮವಾಗಿದ್ದು ವಿವಿಧ ಮಠಾಧೀಶರು ಕಾರ್ಯಕ್ರಮಕ್ಕೆ ಆಗಮಿಸಿ ವಿನಯ ಕುಲಕರ್ಣಿ ಅವರಿಗೆ ಆಶೀರ್ವಾದ ಮಾಡಲಿದ್ದಾರೆ ಎಂದರು.
ಕಾರ್ಯಕ್ರಮಕ್ಕೆ ಧಾರವಾಡ, ಬಾಗಲಕೋಟೆ, ವಿಜಯಪುರ ಹಾಗೂ ಬೆಳಗಾವಿಯಿಂದ ವಿನಯ ಕುಲಕರ್ಣಿ ಅಭಿಮಾನಿಗಳು ಹಾಗೂ ಸಂಘಟಕರು ಆಗಮಿಸಲಿದ್ದಾರೆ. ಆದ್ದರಿಂದ ಸುಮಾರು 5,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಬೇಕೆಂದು ಮನವಿ ಮಾಡಿದ್ದೇವೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಸೃಷ್ಟಿಯಾಗಿದೆ. ಸಾಕಷ್ಟು ಟಿಕೆಟ್ ಆಕಾಂಕ್ಷಿಗಳು ಇದ್ದಾರೆ. ವಿನಯ ಕುಲಕರ್ಣಿಯವರು ಧಾರವಾಡ ಗ್ರಾಮೀಣ ಭಾಗದಿಂದ ಸ್ಪರ್ಧೆ ಮಾಡುವುದು ನಿಶ್ಚಿತ. ಆ ಭಾಗದ ಜನರಿಗೆ ಅನುಭವವಾಗಿದೆ. ಕಳೆದ ಚುನಾವಣೆಯಲ್ಲಿ ನಾವು ತಪ್ಪು ಮಾಡಿದ್ದೇವೆ ಎನ್ನುತ್ತಿದ್ದಾರೆ. ಈ ಬಾರಿ ವಿನಯ ಕುಲಕರ್ಣಿ ಅವರು ಹೊರಗಡೆಯಿದ್ದು ಚುನಾವಣೆಯಲ್ಲಿ ಸ್ಪರ್ಧೆ ನಡೆಸಿ ಗೆಲುವು ಸಾಧಿಸುತ್ತಾರೆ ಎನ್ನುವ ವಿಶ್ವಾಸ ಇದೆ ಎಂದರು.
ಇದನ್ನೂ ಓದಿ : ರಸ್ತೆ ಅಪಘಾತದಲ್ಲಿ ಏಳು ಮಹಿಳೆಯರ ಸಾವು: ಸೂಕ್ತ ಪರಿಹಾರಕ್ಕೆ ಹೆಚ್ ಡಿಕೆ ಆಗ್ರಹ