ಬೆಳಗಾವಿ: ಭೂಕಬಳಿಕೆ ಆರೋಪದಡಿ ಗ್ರಾಮಸ್ಥರೆಲ್ಲ ಸೇರಿ ಯೋಧನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವುದು ದೊಡ್ಡ ಅನ್ಯಾಯ ಎಂದು ಶಾಸಕ ಮಹಾದೇವಪ್ಪ ಯಾದವಾಡ ವಿಷಾದಿಸಿದರು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮದುರ್ಗ ತಾಲೂಕಿನ ತೋಟಗಟ್ಟಿ ಗ್ರಾಮದ ಯೋಧ ವಿಠ್ಠಲ ಕಡಕೋಳ ಅವರ ಕುಟುಂಬಕ್ಕೆ ಗ್ರಾಮಸ್ಥರು ಸಾಮಾಜಿಕ ಬಹಿಷ್ಕಾರ ಹಾಕಿದ್ದು ಸಲ್ಲದು. ಗ್ರಾಮದ ಎಲ್ಲಾ ಸಮುದಾಯದವರು ಸೇರಿ ಯೋಧನ ಕುಟುಂಬದವರನ್ನು ದೂರ ಮಾಡಿದ್ದಾರೆ. ಈ ಬಗ್ಗೆ ಇಂದು ಗ್ರಾಮದ ಮುಖಂಡರು ಹಾಗೂ ಜನಪ್ರತಿನಿಧಿಗಳ ಜೊತೆ ಚರ್ಚಿಸುತ್ತೇನೆ ಎಂದರು.
ಈ ರೀತಿಯ ಘಟನೆಗಳು ಮತ್ತೆ ಮರುಕರಳಿಸದಂತೆ ನಿಗಾವಹಿಸಲಾಗುವುದು. ಅಂಗನವಾಡಿಗೆ ಜಾಗ ನೀಡಿಲ್ಲ ಎಂಬ ಕಾರಣಕ್ಕೆ ಬಹಿಷ್ಕರಿಸಲಾಗಿದೆ ಎಂಬ ವಿಷಯ ಮಾಧ್ಯಮಗಳಿಂದ ತಿಳಿದಿದ್ದೇನೆ. ಅಂಗನವಾಡಿಯನ್ನು ಪಂಚಾಯಿತಿ ಜಾಗದಲ್ಲಿ ನಿರ್ಮಿಸಲು ಕ್ರಮ ತೆಗೆದುಕೊಳ್ಳುತ್ತೇನೆ. ಜಾಗದ ದಾಖಲೆಗಳನ್ನು ಪರಿಶೀಲಿಸಿ, ಅಗತ್ಯ ಬಿದ್ದರೆ ಗ್ರಾಮಕ್ಕೂ ಭೇಟಿ ನೀಡುತ್ತೇನೆ ಎಂದು ಹೇಳಿದರು.