ಬೆಳಗಾವಿ : ಒಂದಲ್ಲ ಮತ್ತೊಂದು ರೀತಿಯ ವಿಭಿನ್ನ ಪ್ರತಿಭಟನೆಗಳ ಮೂಲಕ ಆಕ್ರೋಶ ಹೊರಹಾಕುವ ವಾಟಾಳ್ ನಾಗರಾಜ್ ಇಂದು ನೆರೆ ಪರಿಹಾರಕ್ಕೆ ಆಗ್ರಹಿಸಿ ನಗರದ ಚೆನ್ನಮ್ಮ ವೃತ್ತದಲ್ಲಿ ರಸ್ತೆ ಮೇಲೆ ಮಲಗುವ ಮೂಲಕ ಪ್ರತಿಭಟನೆ ನಡೆಸಿದರು.
ಕುಂದಾನಗರಿಯಲ್ಲಿ ಚಳಿಗಾಲದ ಅಧಿವೇಶನ ನಡೆಸಲೇಬೇಕು. ಜೊತೆಗೆ ಉತ್ತರ ಕರ್ನಾಟಕಕ್ಕೆ ನೆರೆ ಪರಿಹಾರ ತರದ ಶಾಸಕರು ಹಾಗೂ ಸಂಸದರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಕನ್ನಡ ಸೇನೆ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರೊಂದಿಗೆ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು. ಬೆಂಗಳೂರಿಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಪ್ರವಾಹಕ್ಕೆ ತುತ್ತಾದ ಬೆಳಗಾವಿಗೆ ಬರಲಿಲ್ಲ. ಉತ್ತರ ಕರ್ನಾಟಕದಲ್ಲಿ ಆದ ನೆರೆ ಹಾವಳಿಗೆ ಪರಿಹಾರ ನೀಡಿಲ್ಲ. ಚಳಿಗಾಲದ ಅಧಿವೇಶನ ಮಾಡದೇ ಇರುವ ಬಿಜೆಪಿ ಸರ್ಕಾರ ನಮಗೆ ಬೇಕಿಲ್ಲ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ನಗರದ ಹೃದಯಭಾಗ ಚೆನ್ನಮ್ಮ ವೃತ್ತದಲ್ಲಿ ಮಲಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ಪ್ರವಾಹ ಪೀಡಿತರಿಗೆ ನೀಡುತ್ತಿರುವ 10 ಸಾವಿರ ರೂಪಾಯಿ ಪ್ರಮಾಣಿಕವಾಗಿ ತಲಪುತ್ತಿಲ್ಲ. ಇಲ್ಲಿಯೂ ಅವ್ಯವಹಾರ ನಡೆಯುತ್ತಿದೆ. ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು. ಶಾಸಕರು 1 ಲಕ್ಷ ಬೆಲೆ ಬಾಳುವ ಶೂಗಳನ್ನು ಧರಿಸುತ್ತಾರೆ. ಆದರೆ, ನೆರೆ ಸಂತ್ರಸ್ತರಿಗೆ 10ಸಾವಿರ ಕೊಟ್ಟಿದ್ದೇ ಹೆಚ್ಚಾಯ್ತು ಎಂದು ಸಚಿವ ಈಶ್ವರಪ್ಪ ಹೇಳುತ್ತಾರೆ. ಪ್ರಾಣ ಹಾನಿಗೆ 25 ಲಕ್ಷ ರೂ. ಪರಿಹಾರ ನೀಡಬೇಕು. ಹತ್ತು ಸಾವಿರ ರೂಪಾಯಿ ಬದಲಿಗೆ 50 ಸಾವಿರದ ಚೆಕ್ ನಿಡಬೇಕೆಂದು ಆಗ್ರಹಿಸಿದರು. ಈ ವೇಳೆ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ವಶಕ್ಕೆ ಪಡೆದರು.