ಬೆಳಗಾವಿ: ಮರಾಠಾ ನಿಗಮ ಸ್ಥಾಪನೆ ನಿರ್ಧಾರ ಕೈಬಿಡುವಂತೆ ಆಗ್ರಹಿಸಿ ಪುಣೆ - ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆಯಲು ಮುಂದಾದ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಹಾಗೂ ಸಾ.ರಾ. ಗೋವಿಂದ್ ಅವರನ್ನು ಪೊಲೀಸರು ವಶಕ್ಕೆ ಪಡೆದರು.
ವಾಟಾಳ್ ನೇತೃತ್ವದಲ್ಲಿ ಕನ್ನಡ ಸಂಘಟನೆಗಳು ಬೆಳಗಾವಿ ಹೊರವಲಯದ ಸುವರ್ಣ ಸೌಧದ ಎದುರು ಇಂದು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದವು. ಹೆದ್ದಾರಿ ತಡೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದ ವಾಟಾಳ್ ಹಾಗೂ ಸಾ.ರಾ. ಗೋವಿಂದ್ ಇದ್ದ ಕಾರನ್ನು ಹಿರೇಬಾಗೇವಾಡಿ ಟೋಲ್ ಬಳಿ ಪೊಲೀಸರು ತಡೆದರು.
ಪೊಲೀಸರ ಕ್ರಮ ಖಂಡಿಸಿ ವಾಟಾಳ್ ಹಾಗೂ ಸಾ.ರಾ. ಗೋವಿಂದ್ ಸೇರಿದಂತೆ ಹಲವು ಕನ್ನಡ ಸಂಘಟನೆಗಳು ಟೋಲ್ ಬಳಿ ಮಲಗಿ ಹೆದ್ದಾರಿ ತಡೆಯಲು ಮುಂದಾದರು. ಹೀಗಾಗಿ ಪೊಲೀಸರು ವಾಟಾಳ್ ಹಾಗೂ ಸಾ.ರಾ. ಗೋವಿಂದ್ ಸೇರಿ 25 ಕ್ಕೂ ಅಧಿಕ ಕನ್ನಡ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಪೊಲೀಸರ ಕ್ರಮ ಖಂಡಿಸಿ ವಾಟಾಳ್ ಹಾಗೂ ಕನ್ನಡ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು. ಪೊಲೀಸ್ ವಾಹನದಲ್ಲಿ ಎಲ್ಲರನ್ನು ಹಿರೇಬಾಗೇವಾಡಿ ಪೊಲೀಸ್ ಠಾಣೆಗೆ ಕರೆದೊಯ್ದು ಬಳಿಕ ಬಿಡುಗಡೆ ಮಾಡಲಾಯಿತು.