ಚಿಕ್ಕೋಡಿ(ಬೆಳಗಾವಿ): ಬಿಜೆಪಿಯಲ್ಲಿ 75 ವರ್ಷ ವಯಸ್ಸಾದರೆ ಮನೆಗೆ ಕಳುಹಿಸುತ್ತಾರೆ. ಆದರೆ ಕಾಂಗ್ರೆಸ್ನಲ್ಲಿ 90 ವರ್ಷ ವಯಸ್ಸಿನವರನ್ನೂ ಸಹ ಚುನಾವಣೆಗೆ ನಿಲ್ಲಿಸುತ್ತಾರೆಂದು ಪರೋಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ವಿರುದ್ಧ ಸಚಿವ ಉಮೇಶ್ ಕತ್ತಿ ವ್ಯಂಗ್ಯವಾಡಿದರು.
ಚಿಕ್ಕೋಡಿ ಪಟ್ಟಣದಲ್ಲಿ ವಾಯುವ್ಯ ಶಿಕ್ಷಕ ಮತ್ತು ಪದವೀಧರ ಮತಕ್ಷೇತ್ರದ ಪ್ರಚಾರಾರ್ಥ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಕಾಶ್ ಹುಕ್ಕೇರಿ ಮೊದಲು ಪಂಚಾಯತ್ ಸದಸ್ಯನಾಗಿ, ನಂತರ ವಿಧಾನ ಪರಿಷತ್, ವಿಧಾನಸಭೆ, ಲೋಕಸಭೆ ಸದಸ್ಯರಾಗಿ, ಸಚಿವರಾಗಿ ಕೆಲಸ ಮಾಡಿದ್ದಾರೆ. ಇಂದು ಅವರನ್ನು ವಾಯುವ್ಯ ಶಿಕ್ಷಕ ಮತಕ್ಷೇತ್ರದ ಅಭ್ಯರ್ಥಿಯಾಗಿ ಕಾಂಗ್ರೆಸ್ನಿಂದ ಕಣಕ್ಕಿಳಿಸಿದ್ದಾರೆ. ಉದ್ಯೋಗ ಕಳೆದುಕೊಂಡ ಬಳಿಕ ಉದ್ಯೋಗ ಹುಡುಕಾಡುವ ಕೆಲಸವನ್ನು ಪ್ರಕಾಶ್ ಹುಕ್ಕೇರಿ ಮಾಡುತ್ತಿದ್ದಾರೆಂದು ಟೀಕಿಸಿದರು.
ಅರುಣ್ ಶಹಾಪುರ ಶಿಕ್ಷಕರ ಕ್ಷೇತ್ರಕ್ಕೆ ಸ್ಪರ್ಧಿಸಿದ್ದಾರೆ. ಅವರಿಗೆ ಶಿಕ್ಷಕರ ಬಗ್ಗೆ ಕಾಳಜಿ ಇದೆ. ಪದವಿಧರ ಕ್ಷೇತ್ರಕ್ಕೆ ಹನಮಂತ ನಿರಾಣಿ ಕಣಕ್ಕಿಳಿದಿದ್ದಾರೆ. ಅವರು ಕೂಡ ಪದವೀಧರರಿದ್ದಾರೆ. ಕಾಂಗ್ರೆಸ್ ಪದವೀಧರ ಕ್ಷೇತ್ರದ ಅಭ್ಯರ್ಥಿ ಸುನೀಲ್ ಸಂಖ ಯಾರು ಅನ್ನೋದೆ ಗೊತ್ತಿಲ್ಲ. ಹಾಗಾಗಿ ಇವೆಲ್ಲವನ್ನೂ ಬದಿಗಿಟ್ಟು ಬಿಜೆಪಿ ಅಭ್ಯರ್ಥಿಗೆ ಮತ ನೀಡುವ ಮೂಲಕ ಕಾಂಗ್ರೆಸ್ ಅಭ್ಯರ್ಥಿಗಳನ್ನು ಮನೆಗೆ ಕಳುಹಿಸುವ ಕೆಲಸ ಮಾಡಿ ಎಂದು ಸಚಿವ ಉಮೇಶ್ ಕತ್ತಿ ಹೇಳಿದರು.
ಇದನ್ನೂ ಓದಿ: ಜೆಡಿಎಸ್ ಅಭ್ಯರ್ಥಿ ಕಣದಿಂದ ನಿವೃತ್ತಿ ಮಾಡಿಸೋದೇ ಈಗ ಸಂಧಾನ: ಸಿದ್ದರಾಮಯ್ಯ