ಬೆಳಗಾವಿ: ಕೋವಿಡ್-19 ಸೋಂಕು ತಗುಲಿದ್ದ ಹಿರೇಬಾಗೇವಾಡಿಯ ದಂಪತಿ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಬಿಮ್ಸ್ ನಿರ್ದೇಶಕ ಡಾ. ವಿನಯ ದಾಸ್ತಿಕೊಪ್ಪ ತಿಳಿಸಿದ್ದಾರೆ.
ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿಯ 50 ವರ್ಷದ ವ್ಯಕ್ತಿ ಹಾಗೂ 50 ವರ್ಷದ ಅವರ ಪತ್ನಿಯನ್ನು ಇಂದು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಯಿತು. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 54 ಜನರಲ್ಲಿ ಸೋಂಕು ಪತ್ತೆಯಾಗಿದೆ. ಆ ಪೈಕಿ ಆರು ಜನರನ್ನು ಈಗಾಗಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಬಿಮ್ಸ್ ನಿರ್ದೇಶಕ ಡಾ. ವಿನಯ ದಾಸ್ತಿಕೊಪ್ಪ ತಿಳಿಸಿದ್ದಾರೆ.
ಕೊರೊನಾ ಪಾಸಿಟಿವ್ ಹೊಂದಿದ್ದವರ ಜೊತೆ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ 88 ಜನರನ್ನು ಸಿಹಿ ತಿನಿಸಿ ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಡಲಾಯಿತು.
ನಗರದ ಖಾಸಗಿ ಲಾಡ್ಜ್ವೊಂದರಲ್ಲಿ 88 ಮಂದಿಯನ್ನು ಬುಡಾ ಆಯುಕ್ತ ಪ್ರೀತಮ್ ನಸಲಾಪುರೆ ನೇತೃತ್ವದಲ್ಲಿ ಬಿಡುಗಡೆ ಮಾಡಲಾಯಿತು. ಇವರಿಗೆ ಎರಡು ಬಾರಿ ಕೊರೊನಾ ಟೆಸ್ಟ್ ಮಾಡಲಾಗಿದ್ದು, ನೆಗೆಟಿವ್ ವ ರದಿ ಬಂದಿದೆ. ಹಾಗಾಗಿ ಈ ಎಲ್ಲಾ 88 ಜನರಿಗೆ ಅವರವರ ಗ್ರಾಮದ ಮನೆಗೆ ರವಾನೆ ಮಾಡಿ, ಮುಂದಿನ 14 ದಿನಗಳ ಕಾಲ ಹೋಮ್ ಕ್ವಾರಂಟೈನ್ನಲ್ಲಿ ಇರಲು ಸೂಚನೆ ನೀಡಲಾಗಿದೆ.
ಬಿಡುಗಡೆಯಾದವರಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ಸಿಹಿ ತಿನ್ನಿಸಿ ಚಪ್ಪಾಳೆ ತಟ್ಟಿ ಬಸ್ ಮೂಲಕ ಕಳುಹಿಸಿಕೊಡಲಾಯಿತು.