ಬೆಳಗಾವಿ: ಕಿತ್ತೂರು ತಹಶೀಲ್ದಾರ್ ಮತ್ತು ಗುಮಾಸ್ತ ಎರಡು ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಸೋಮವಾರದವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶ ನೀಡಿದ ಹಿನ್ನೆಲೆ ತಹಶಿಲ್ದಾರ್ ಮತ್ತು ಗುಮಾಸ್ತನನ್ನು ಹಿಂಡಲಗಾ ಜೈಲಿಗೆ ಕಳುಹಿಸಲಾಗಿದೆ.
ಜಿಲ್ಲೆಯ ಕಿತ್ತೂರು ತಾಲೂಕಿನ ತಹಶಿಲ್ದಾರ್ ಸೋಮಲಿಂಗ ಹಾಲಗಿ, ಗುಮಾಸ್ತ ಪ್ರಸನ್ನ ಜಿ.ನಿನ್ನೆ ತಡರಾತ್ರಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದರು. ಇಂದು ಬೆಳಗಿನ ಜಾವ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಇಬ್ಬರಿಗೆ ಆರೋಗ್ಯ ತಪಾಸಣೆ ನಡೆಸಿ ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು.
ಈ ವೇಳೆ ನ್ಯಾಯಾಧೀಶರು ಸೋಮವಾರದವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದ್ದಾರೆ. ಸೋಮವಾರ ಇಬ್ಬರನ್ನು ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ರೈತನನ್ನು ಮನೆಗೆ ಕರೆಯಿಸಿ 2 ಲಕ್ಷ ಲಂಚ ಪಡೆಯುತ್ತಿದ್ದ ತಹಶಿಲ್ದಾರ್.. ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ