ಬೆಳಗಾವಿ: ಕೆಲ ದಿನಗಳ ಹಿಂದೆ ತೀವ್ರ ಚರ್ಚೆಗೆ ಕಾರಣವಾಗಿದ್ದ, ಬೆತ್ತಲೆಯಾಗಿ ಯುವತಿ ಬೈಕ್ ರೈಡ್ ಮಾಡಿದ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಈ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು ರಾತ್ರಿ ಬೆತ್ತಲೆಯಾಗಿ ಬೈಕ್ ಓಡಿಸಿದ್ದು ಯುವತಿಯಲ್ಲ. ತೃತೀಯಲಿಂಗಿ ಎಂದು ಪೊಲೀಸ್ ಆಯುಕ್ತ ಲೋಕೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಆಗಸ್ಟ್ 13 ರಂದು ನಗರದ ಕ್ಲಬ್ ರಸ್ತೆಯಲ್ಲಿ ಯುವತಿಯಂತೆ ಹೋಲುತ್ತಿದ್ದ ವ್ಯಕ್ತಿ ಬೆತ್ತಲೆಯಾಗಿ ಬೈಕ್ ಓಡಿಸಿಕೊಂಡು ಹೋಗಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕ್ಯಾಂಪ್ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದರು.
ಈ ಬಗ್ಗೆ ಪೊಲೀಸರು ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ ಬೈಕ್ ಓಡಿಸಿದ್ದು ತೃತೀಯಲಿಂಗಿ ಎನ್ನುವುದು ದೃಢವಾಗಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದ ಹಾಗೆ ಇಬ್ಬರು ತೃತೀಯಲಿಂಗಿಗಳು ಪರಾರಿಯಾಗಿದ್ದು ಪೊಲೀಸರು ಅವರಿಗಾಗಿ ಶೋಧ ನಡೆಸಿದ್ದಾರೆ. ಇಬ್ಬರ ಬಗ್ಗೆಯೂ ಮಾಹಿತಿ ಸಿಕ್ಕಿದ್ದು ಶೀಘ್ರ ಬಂಧಿಸುತ್ತೇವೆ. ಅವರಿಗೆ ಕೌನ್ಸೆಲಿಂಗ್ ಮಾಡಲು ಕೆಲ ಸಂಘ ಸಂಸ್ಥೆಗಳು ಮುಂದೆ ಬಂದಿದ್ದು, ಕೌನ್ಸೆಲಿಂಗ್ ಕೊಡಿಸಲಾಗುವುದು. ಅದರಲ್ಲಿ ಓರ್ವ ಲಿಂಗಪರಿವರ್ತನೆ ಮಾಡಿಕೊಂಡಿದ್ದಾರೆ ಎಂಬುವುದರ ಬಗ್ಗೆ ಖಚಿತಮಾಹಿತಿ ಸಿಕ್ಕಿಲ್ಲ. ಅವರನ್ನು ವಶಕ್ಕೆ ಪಡೆದ ಬಳಿಕ ಎಲ್ಲವೂ ಬೆಳಕಿಗೆ ಬರಲಿದೆ ಎಂದರು. ಬಳಿಕ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗುವುದು ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.