ಬೆಳಗಾವಿ : 6ನೇ ವೇತನ ಜಾರಿಗೆ ಆಗ್ರಹಿಸಿ ರಾಜ್ಯಾದ್ಯಂತ ಸಾರಿಗೆ ನೌಕರರಿಂದ ಮುಷ್ಕರ ನಡೆಯುತ್ತಿದೆ. ಆದರೆ, ಬೆಳಗಾವಿ ವಿಭಾಗದ ಚಾಲಕನೊಬ್ಬರು ಮುಷ್ಕರದಿಂದ ದೂರ ಉಳಿದಿದ್ದಾರೆ. ಅಲ್ಲದೆ ಹೆಲ್ಮೆಟ್ ಧರಿಸಿ ಕರ್ತವ್ಯಕ್ಕೆ ಹಾಜರಾಗುವ ಮೂಲಕ ಗಮನ ಸೆಳೆದಿದ್ದಾರೆ.
ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಸಾರಿಗೆ ಇಲಾಖೆ ಅಧಿಕಾರಿಗಳ ನಿರ್ದೇಶನದ ಮೇರೆಗೆ ಚಾಲಕ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಬೆಳಗಾವಿಯಿಂದ ಧಾರವಾಡಕ್ಕೆ ತೆರಳುವ ಬಸ್ನಲ್ಲಿ ಹೆಲ್ಮೆಟ್ ಧರಿಸಿ ಬಸ್ ಚಲಾಯಿಸುತ್ತಿದ್ದಾರೆ.
ಮುಷ್ಕರ ನಿರತ ಸಾರಿಗೆ ಸಿಬ್ಬಂದಿ ಪ್ರತಿಭಟಿಸಿ ಕಲ್ಲು ತೂರಿದ್ರೆ ತಪ್ಪಿಸಿಕೊಳ್ಳಲು ಚಾಲಕ ಈ ಐಡಿಯಾ ಮಾಡಿದ್ದಾನಂತೆ. ಹೆಲ್ಮೆಟ್ ಧರಿಸುವುದರಿಂದ ಗುರುತು ಸಿಗುವುದಿಲ್ಲ ಎಂಬ ಲೆಕ್ಕಾಚಾರವೂ ಚಾಲಕನದ್ದಾಗಿದೆ. ಅಸಲಿಗೆ ಈತ ಸಾರಿಗೆ ಸಿಬ್ಬಂದಿ ಹೌದೋ ಅಲ್ವೋ ಅನ್ನೋದು ಸಹ ಗೊತ್ತಾಗುತ್ತಿಲ್ಲ. ಬೆಳಗಾವಿಯಲ್ಲಿ ಕೊಲ್ಲಾಪುರ, ಧಾರವಾಡ ಹಾಗೂ ಹುಬ್ಬಳ್ಳಿಗೆ ಬಸ್ ಸೇವೆ ಆರಂಭವಾಗಿದೆ.
ಮಾರ್ಕೆಟ್ ಠಾಣೆಯ ಪಿಐ ಸಂಗಮೇಶ ಶಿವಯೋಗಿ ನೇತೃತ್ವದ ಪೊಲೀಸ್ ತಂಡ ಕರ್ತವ್ಯಕ್ಕೆ ಹಾಜರಾದ ಸಾರಿಗೆ ಸಿಬ್ಬಂದಿ ಮತ್ತು ಬಸ್ಗಳಿಗೆ ಭದ್ರತೆ ನೀಡುತ್ತಿದ್ದಾರೆ. ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿವರೆಗೆ ಬಸ್ಗಳಿಗೆ ಪೊಲೀಸ್ ಭದ್ರತೆ ನೀಡಲಾಗಿದೆ.
ದುಪ್ಪಟ್ಟು ದರ- ಮೈಚಳಿ ಬಿಡಿಸಿದ ಮಹಿಳೆ : ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದ ಆಟೋ ಚಾಲಕನಿಗೆ ಮಹಿಳೆ ಮೈಚಳಿ ಬಿಡಿಸಿದ ಘಟನೆ ಬಸ್ ನಿಲ್ದಾಣದಲ್ಲಿ ನಡೆದಿದೆ. ದುಪ್ಪಟ್ಟು ಹಣಕ್ಕೆ ಬೇಡಿಕೆ ಇಟ್ಟ ಆಟೋ ಡ್ರೈವರ್ ಜೊತೆ ಮಹಿಳೆ ವಾಗ್ವಾದ ನಡೆಸಿದ್ದಾರೆ.
ದುಪ್ಪಟ್ಟು ಹಣ ನೀಡಲು ನಿರಾಕರಿಸಿದ ಮಹಿಳೆಗೆ ಚಾಲಕ ನಿಂದಿಸಿದ್ದಾನೆ. ಅವಾಚ್ಯ ಶಬ್ಧ ಬಳಸಿದ್ದಕ್ಕೆ ಮಹಿಳೆಯೂ ತನ್ನದೇ ಶೈಲಿಯಲ್ಲಿ ಚಾಲಕನ ಮೈ ಚಳಿ ಬಿಡಿಸಿದಳು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಬ್ಬರನ್ನೂ ಸಮಾಧಾನ ಪಡೆಸಿದ್ದಾರೆ.