ಬೆಳಗಾವಿ : ಪ್ರೀತಿಯ ಬಲೆಗೆ ಬಿದ್ದಿದ್ದ ಅಪ್ರಾಪ್ತ ಬಾಲಕಿ ಮದುವೆಗೆ ಒಪ್ಪದಿದ್ದಾಗ ಅಪಹರಣ ಮಾಡಿ ಕೊಲೆ ಮಾಡಿರುವ ಅಪ್ರಾಪ್ತ ಬಾಲಕ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದ ಆದರ್ಶ ದತ್ತು ಪಾರ್ಥನಳ್ಳಿ (24), ಕಿರಣ ಕೆಂಚಪ್ಪ ಜಗದಾಳ (24) ಹಾಗೂ ಅಪ್ರಾಪ್ತ ಬಾಲಕ ಸೇರಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಹಾರೂಗೇರಿ ಪೊಲೀಸ್ ಠಾಣೆಯಲ್ಲಿ 2019ರ ನವೆಂಬರ್‌ನಲ್ಲಿ ಅಪ್ರಾಪ್ತ ಬಾಲಕಿಯ ಅಪರಣದ ಕುರಿತು ಪ್ರಕರಣ ದಾಖಲಾಗಿತ್ತು. ಪಿಎಸ್‌ಐ ಯಮನಪ್ಪ ಮಾಂಗ ನೇತೃತ್ವದ ಪೊಲೀಸರ ತಂಡ ತನಿಖೆ ಆರಂಭಿಸಿತ್ತು.
ಘಟನೆ ಸಂಬಂಧ ಆದರ್ಶ ಪಾರ್ಥನಳ್ಳಿ ಎಂಬಾತನನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಅಪ್ರಾಪ್ತ ಬಾಲಕ ಸೇರಿ ಬಂಧಿತ ಮೂವರು ಭಾಗಿಯಾಗಿರುವ ಕುರಿತು ಬೆಳಕಿಗೆ ಬಂದಿದೆ.
ಆರೋಪಿ ಆದರ್ಶ ಪಾರ್ಥನಳ್ಳಿ ಮತ್ತು ಅಪ್ರಾಪ್ತೆಯನ್ನು ಪ್ರೀತಿಸುತ್ತಿದ್ದ. ಹೀಗಾಗಿ ಆದರ್ಶ ಮತ್ತು ಆತನ ಗೆಳೆಯ ಆ ಬಾಲಕಿಯನ್ನು ಅಪಹರಣ ಮಾಡಿಕೊಂಡು ಧಾರವಾಡಕ್ಕೆ ಕರೆದುಕೊಂಡು ಬಂದಿದ್ದರು.
ಧಾರವಾಡದಲ್ಲಿ ಶಿಕ್ಷಣ ಪಡೆಯುತ್ತಿದ್ದ ಆದರ್ಶ ಎಂಬಾತ 2019ರ ನವೆಂಬರ್‌ನಿಂದ 2020ರ ಮೇ ತಿಂಗಳವರೆಗೆ ಧಾರವಾಡದಲ್ಲಿ ಮೃತ ಬಾಲಕಿ ಮತ್ತು ಆದರ್ಶ ಪಾರ್ಥನಳ್ಳಿ ಇಬ್ಬರು ವಾಸವಾಗಿದ್ದರು.
ಇದಾದ ಬಳಿಕ ನಿಪ್ಪಾಣಿ ಸಮೀಪದ ಗ್ರಾಮವೊಂದರಲ್ಲಿ ಆದರ್ಶ ಪಾರ್ಥನಳ್ಳಿ ಸ್ನೇಹಿತನ ಸಂಬಂಧಿಕರ ಮನೆಯಲ್ಲಿ ಆಕೆಯನ್ನು ಇರಿಸಿದ್ದನು. ಈ ವೇಳೆ ಬಾಲಕಿ ಆದರ್ಶನನ್ನು ಬಿಟ್ಟು ಬೇರೆಯವರೊಂದಿಗೆ ಮದುವೆ ಮಾಡಿಕೊಳ್ಳುವುದಾಗಿ ಹೇಳಿದ್ದಳು.
ಇದರಿಂದಾಗಿ ಕುಪಿತಗೊಂಡ ಆದರ್ಶ ತನ್ನ ಮೂವರು ಗೆಳೆಯರೊಂದಿಗೆ ಸೇರಿ ಅಪ್ರಾಪ್ತ ಬಾಲಕಿಯನ್ನು 2020ರ ಜೂನ್ 9ರಂದು ಖಾನಾಪುರ ತಾಲೂಕಿನ ಕಣಕುಂಬಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಕರೆತಂದು ಆಕೆಗೆ ಮದ್ಯ ಕುಡಿಸಿದ್ದಾರೆ.
ನಂತರ ಮಚ್ಚಿನಿಂದ ಆಕೆಯ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಅಪ್ರಾಪ್ತ ಬಾಲಕಿಯ ಶವವನ್ನು ಅರಣ್ಯ ಪ್ರದೇಶದಲ್ಲಿ ಹೂತು ಹಾಕಿ ಹೋಗಿರುವ ಕುರಿತು ಪೊಲೀಸರ ಮುಂದೆ ಬಾಯಿಟ್ಟಿದ್ದಾರೆ. ಮೂವರನ್ನು ಕಣಕುಂಬಿಯ ಕೊಲೆ ಮಾಡಿರುವ ಸ್ಥಳ ಕರೆದುಕೊಂಡು ಹೋಗಿ ತಪಾಸಣೆ ನಡೆಸಿದಾಗ ಬಾಲಕಿಯ ಅಸ್ಥಿಪಂಜರ ಪತ್ತೆಯಾಗಿದೆ.
ಪೊಲೀಸರು ಮೂವರು ಅಪಹರಣ ಮತ್ತು ಕೊಲೆಗೆ ಬಳಕೆ ಮಾಡಿರುವ ಮುಚ್ಚು, ಮೊಬೈಲ್, ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ. ಬಂಧಿತ ಮೂವರನ್ನು ನ್ಯಾಯಾಲಯಕ್ಕೆ ಹಾಜರಪಡಿಸಲಾಗಿದ್ದು, ನ್ಯಾಯಾಲಯ ಹೆಚ್ಚಿನ ವಿಚಾರಣೆಗಾಗಿ ಪೊಲೀಸರ ವಶಕ್ಕೆ ನೀಡಿದೆ.