ಬೆಳಗಾವಿ: ಕಳೆದ ಒಂದು ವಾರದಿಂದ ಮಳೆಯಾಗುತ್ತಿದ್ದರೂ ಜಿಲ್ಲೆಯ ನದಿಗಳು, ಹಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿಲ್ಲ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಚಿಕ್ಕೋಡಿಯಲ್ಲಿ 4 ಬ್ಯಾರೇಜ್ಗಳು, ಗೋಕಾಕ್ ಮತ್ತು ಮೂಡಲಗಿಯ ತಲಾ ಮೂರು ಬ್ಯಾರೇಜ್ಗಳು ಸಣ್ಣ ಮಟ್ಟದ್ದಾಗಿವೆ. ಹಾಗಾಗಿ ಪ್ರತಿವರ್ಷ ಅವುಗಳು ಸಣ್ಣ ಪ್ರಮಾಣದಲ್ಲಿ ಮಳೆ ಆದ್ರೂ ಮುಳುಗಡೆ ಆಗುತ್ತವೆ. ಇದರಿಂದ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಎಂದರು.
ಮಳೆಯಿಂದ ಇದುವರೆಗೆ ಜಿಲ್ಲೆಯ ಯಾವುದೇ ಗ್ರಾಮಗಳ ಸಂಪರ್ಕ ಕಡಿತವಾಗಿಲ್ಲ. ಯಾವುದೇ ಹಳ್ಳಿಗಳೂ ಮುಳುಗಡೆ ಆಗಿಲ್ಲ. ಕೊಯ್ನಾ ಡ್ಯಾಂನಲ್ಲಿ ನೀರು ಸಂಗ್ರಹ ಸಾಮರ್ಥ್ಯ 105 ಟಿಎಂಸಿ ಇದೆ. ಪ್ರಸ್ತುತ ಅಲ್ಲಿರುವ ನೀರು 31 ಟಿಎಂಸಿ. ಹಾಗಾಗಿ ಸದ್ಯ ಜಿಲ್ಲೆಗೆ ಪ್ರವಾಹ ಭೀತಿ ಎದುರಾಗಿಲ್ಲ. ಆದರೂ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರವಾಹ ಪರಿಸ್ಥಿತಿ ಎದುರಾದರೆ ನಿಭಾಯಿಸಲು ಅಧಿಕಾರಿಗಳನ್ನು ನೇಮಕ ಮಾಡಿದ್ದೇವೆ. ಚಿಕ್ಕೋಡಿಯಲ್ಲಿ ಎನ್.ಡಿ.ಆರ್.ಎಫ್ ತಂಡದ 21 ಜನ ಸದಸ್ಯರು ಸಿದ್ಧರಾಗಿದ್ದಾರೆ. ಬೆಳಗಾವಿಯಲ್ಲೂ ಎಸ್.ಡಿ.ಆರ್.ಎಫ್ ತಂಡ ಬೀಡು ಬಿಟ್ಟಿದೆ. ರಕ್ಷಣಾ ಕಾರ್ಯಕ್ಕೆ ನಾಲ್ಕು ಬೋಟುಗಳನ್ನು ಇಟ್ಟುಕೊಳ್ಳುವ ಮೂಲಕ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಸಿಎಂ ಯಡಿಯೂರಪ್ಪನವರು ನನಗೆ ಕರೆ ಮಾಡಿ ಪ್ರವಾಹ ಭೀತಿ, ಮುಳುಗಡೆ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಅಂತಹ ಯಾವುದೇ ಘಟನೆಗಳು ಸಂಭವಿಸಿಲ್ಲ ಎಂದು ತಿಳಿಸಿದ್ದಲ್ಲದೆ, ಪ್ರವಾಹ ಎದುರಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಮಾಹಿತಿ ನೀಡಿದ್ದೇನೆ ಎಂದು ತಿಳಿಸಿದರು.
ಓದಿ : ವರುಣಾರ್ಭಟಕ್ಕೆ ಕುಂದಾನಗರಿ ತತ್ತರ: ಕೊಚ್ಚಿ ಹೋದ ರಸ್ತೆ, ಬೆಳಗಾವಿ-ಗೋವಾ ಸಂಪರ್ಕ ಕಡಿತ