ಪ್ರಧಾನಿ ನರೇಂದ್ರ ಮೋದಿ ಕೊರೊನಾ ವಿರುದ್ಧದ ಹೋರಾಟಕ್ಕೆ ಏಕತೆಯ ದೀಪ ಹಚ್ಚುವ ಕರೆಗೆ ರಾಜ್ಯದ ಒಳ್ಳೇ ರೀತಿಯಿಂದಲೇ ಸ್ಪಂದಿಸಿದ್ದಾರೆ. ಹಾವೇರಿಯಲ್ಲಿ ಕುಟುಂಬ ಸಮೇತರಾಗಿ ಜನ ಮಣ್ಣಿನ ಹಣತೆ, ಕ್ಯಾಂಡಲ್ಗಳನ್ನು ಹಿಡಿದು ದೀಪ ಬೆಳಗಿದರು. ದಾವಣಗೆರೆಯಲ್ಲೂ ಸುಮಾರು ಮೂರು ಗಂಟೆಗಳ ಕಾಲ ಮಳೆ ಸುರಿದರೂ ಮನೆಯಲ್ಲೇ ಲೈಟ್ ಆಫ್ ಮಾಡಿ ದೀಪ ಹಚ್ಚಿದ್ದಾರೆ. ಜಿಲ್ಲೆಯ ಹೊನ್ನಾಳಿ ಪಟ್ಟಣದ ತಮ್ಮ ಸ್ವಗೃಹದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ದೀಪ ಬೆಳಗಿದರು.
ದೀಪ ಬೆಳಗಿಸಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ ಹಿನ್ನೆಲೆಯಲ್ಲಿ ಚಿಕ್ಕೋಡಿಯಲ್ಲಿ ಪ್ರಧಾನಿ ಕರೆಗೆ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಮನೆ ಮನೆಗಳ ಮುಂದೆ ಸಾರ್ವಜನಿಕರು ದೀಪ ಬೆಳಗಿಸಿದರು. ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಒಗ್ಗಟ್ಟನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಕರೆಕೊಟ್ಟಿದ್ದ ದೀಪ ಬೆಳಗುವ ಕಾರ್ಯಕ್ರಮಕ್ಕೆ ಕಾರವಾರದಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ಗಿಂಡಿವಾಡ, ಗುನಗಿವಾಡ, ಮಾರುತಿಗಲ್ಲಿ, ಕುರ್ಸಾವಾಡ ಸೇರಿ ಪ್ರಮುಖ ಬೀದಿಗಳ ಮನೆಗಳಲ್ಲಿ 9 ಗಂಟೆ 9 ನಿಮಿಷಕ್ಕೆ ಸರಿಯಾಗಿ ಮೇಣದ ಬತ್ತಿ, ದೀಪಗಳನ್ನು ಬೆಳಗಲಾಯಿತು.
ಶಿವಮೊಗ್ಗದಲ್ಲೂ ಪ್ರತಿಯೊಬ್ಬರು ತಮ್ಮ ಮನೆ ಮುಂದೆ ರಂಗೋಲಿ ಬಿಡಿಸಿ ಅದರ ಮಧ್ಯೆ ಹಣತೆ, ಮೇಣದಬತ್ತಿ ಹಚ್ಚಿ ಪ್ರಧಾನಿ ಕರೆಗೆ ಬೆಂಬಲ ಸೂಚಿಸಿದರು. ಪ್ರಧಾನಿ ಕರೆಗೆ ಸ್ಪಂದಿಸಿದ ಬೀದರ್ ಜನತೆ ದೀಪ ಹಚ್ಚಿ ಪ್ರಧಾನಿಗೆ ಜೈ ಎಂದಿದ್ದಾರೆ. ಮಂಡ್ಯದಲ್ಲಿ ಜಿಲ್ಲೆಯಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಕೊಪ್ಪಳದಲ್ಲಿಯೂ ಜನರು ದೀಪಗಳನ್ನು ಬೆಳಗಿದರು. ಕೆಲವರು ಮನೆಯ ಮಾಳಿಗೆಯ ಮೇಲೆ ನಿಂತು ಮೊಬೈಲ್ ಟಾರ್ಚ್‌ಗಳನ್ನು ಆನ್ ಮಾಡಿದರು. ಮಂಗಳೂರಿನಲ್ಲಿ ದೀಪ, ಟಾರ್ಚ್‌ಲೈಟ್, ಮೇಣದ ಬತ್ತಿಗಳನ್ನು ಬೆಳಗಿದರು. ಮಾರ್ಚ್ 22ರಂದು ಜನತಾ ಕರ್ಫ್ಯೂ ಆಚರಿಸಿ ಸಂಜೆ 5ಗಂಟೆಗೆ ಮನೆಯಿಂದ ಹೊರಬಂದು ಅಥವಾ ಬಾಲ್ಕನಿಯಲ್ಲಿ ನಿಂತು ವೈದ್ಯರಿಗೆ ಚಪ್ಪಾಳೆ ತಟ್ಟಬೇಕೆಂದು ಮೋದಿ ಕರೆ ನೀಡಿದ ಸಂದರ್ಭವೂ ಇದೇ ರೀತಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಕುಂದಾನಗರಿಯಲ್ಲಿ ದೀಪ ಸಂಗ್ರಾಮ ನಡೆಯಿತು. ನಗರ ನಿವಾಸಿಗಳು ಗಲ್ಲಿ ಗಲ್ಲಿಗಳಲ್ಲಿ ದೀಪ ಬೆಳಗಿದರು. ಗಣಿ ಜಿಲ್ಲೆಯ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಕೆಲವರು ಮಣ್ಣಿನ ದೀಪಗಳಿಗೆ ಮೊರೆ ಹೋದ್ರೆ, ಹಲವರು ಮೇಣದ ಬತ್ತಿ ಅಥವಾ ಮೊಬೈಲ್ ಟಾರ್ಚ್ನ ಒಂಬತ್ತು ನಿಮಿಷಗಳ ಕಾಲ ಬೆಳಗಿ, ಕೊರೊನಾ ಮಹಾಮಾರಿ ದೂರಾಗಿಸುವಂತೆ ಆ ಅಗ್ನಿ ದೇವನಲ್ಲಿ ಬೇಡಿದರು. ತುಮಕೂರಿನ ಸಿದ್ಧಗಂಗಾ ಮಠದಲ್ಲಿ ರಾತ್ರಿ 9 ಗಂಟೆಗೆ ದೀಪ ಹಚ್ಚಿ ಏಕತೆ ಸಾರಲಾಯಿತು. ಶ್ರೀ ಸಿದ್ಧಲಿಂಗ ಸ್ವಾಮೀಜಿ ಜ್ಯೋತಿಯನ್ನು ಬೆಳಗಿಸಿದರು. ಕೊರೊನಾ ಭೀತಿಯನ್ನು ಸಾರ್ವಜನಿಕರಲ್ಲಿ ಹೋಗಲಾಡಿಸಿ ಎಲ್ಲರಲ್ಲಿ ಆತ್ಮವಿಶ್ವಾಸ ಮೂಡಿಸಲು ದೀಪ ಹಚ್ಚುವ ಅಭಿಯಾನಕ್ಕೆ ವಿಜಯಪುರದಲ್ಲಿ ಉತ್ತಮ ಸ್ಪಂದನದ ದೊರೆತಿದೆ. ನಗರದ ಜನ ಬಡಾವಣೆಯಲ್ಲಿ ರಸ್ತೆ ಲೈಟ್ ಹಾಗೂ ಮನೆಯ ಲೈಟ್ ಬಂದ್ ಮಾಡಿ ದೀಪ, ಕ್ಯಾಂಡಲ್ ಹಚ್ಚಿ ಸಂತಸ ವ್ಯಕ್ತಪಡಿಸಿದರು.
ಬೆಂಗಳೂರಿನ ಯಲಹಂಕದ ಅಯ್ಯಪ್ಪ ಬಡಾವಣೆಯಲ್ಲಿ ದೀಪ ಹಚ್ಚುವ ಮೂಲಕ ಸಂಕಲ್ಪ ಮಾಡಲಾಯಿತು. ಚಿಕ್ಕಬಳ್ಳಾಪುರದ ನಿವೃತ್ತ ತಹಶೀಲ್ದಾರ್‌ರ ಕುಟುಂಬ ಹಾಗೂ ಅಲ್ಲಿರುವ ಸಾರ್ವಜನಿಕರು ದೀಪ ಹಚ್ಚಿದರು. ಕೊರೊನಾ ವಿರುದ್ಧದ ಮಾನಸಿಕ ಸಿದ್ಧತೆಗೆ ಏಕತಾ ಹೋರಾಟಕ್ಕೆ ದೀಪ ಹಚ್ಚುವಂತೆ ಪ್ರಧಾನಿ ಮೋದಿ ಅವರು ಕರೆ ನೀಡಿದ ಹಿನ್ನೆಲೆ ಮಂಜಿನ ನಗರಿ ಮಡಿಕೇರಿಯಲ್ಲೂ ಜನತೆ ದೀಪ ಬೆಳಗಿ ಒಗ್ಗಟ್ಟಿನ ಮಂತ್ರ ಜಪಿಸಿದರು. ಹುಬ್ಬಳ್ಳಿಯಲ್ಲಿ ಸಾರ್ವಜನಿಕರು, ಮೋದಿ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ತಮ್ಮ ಮನೆಯ ವಿದ್ಯುತ್ ದೀಪಗಳನ್ನು ಆರಿಸಿ ಅಲಂಕಾರ ಮಾಡಿದ ಜ್ಯೋತಿಗಳನ್ನು ಬೆಳಗಿಸುವ ಮೂಲಕ ಮೋದಿಯವರಿಗೆ ಬೆಂಬಲಿಸಿದರು.