ಬೆಳಗಾವಿ: ಪ್ಲಾಸ್ಟಿಕ್ ಹಾಗೂ ಕಸದಿಂದ ತುಂಬಿದ್ದ ಮಲಪ್ರಭಾ ನದಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಜನಸಾಮಾನ್ಯರಂತೆ ಸ್ವಚ್ಛತೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಖಾನಾಪೂರ ತಾಲೂಕಿನ ತಹಶೀಲ್ದಾರ್ ಶಿವಾನಂದ ಅವರ ನಡೆ ಸಾರ್ವಜನಿಕರಿಂದ ಮೆಚ್ಚುಗೆ ಪಡಿದಿದೆ.

ಖಾನಾಪೂರದಲ್ಲಿ ಹರಿಯುವ ಮಲಪ್ರಭಾ ನದಿಯಲ್ಲಿ ಕಸ ತುಂಬಿಕೊಂಡು ಅತ್ಯಂತ ಕೆಟ್ಟ ಪರಿಸ್ಥಿತಿ ತಲುಪಿದ್ದರಿಂದ ನದಿಯ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಗಿತ್ತು. ಇದಕ್ಕೆ ತಾಲೂಕಿನ ತಹಶೀಲ್ದಾರ್ ಶಿವಾನಂದ ಉಳ್ಳಾಗಡ್ಡಿ ತಾವೇ ಬಂದು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಜೊತೆಗೆ ನಗರದ ಪಿಎಸ್ಐ, ಸಿಪಿಐ ಸೇರಿದಂತೆ ಅನೇಕ ಅಧಿಕಾರಿಗಳು ಭಾಗವಹಿಸಿ ನದಿ ಸ್ವಚ್ಛತಾ ಕಾರ್ಯ ಮಾಡಿದರು.

ಸುಮಾರು ಐದು ಗಂಟೆಗಳ ಕಾಲ ನಡೆದ ಈ ಸ್ವಚ್ಛತಾ ಕಾರ್ಯದಲ್ಲಿ ನದಿಯಲ್ಲಿ ಎಸೆದಿದ್ದ ಹಳೆ ಬಟ್ಟೆಗಳು, ದೇವರ ಫೋಟೋಗಳು ಹಾಗೂ ಪ್ಲಾಸ್ಟಿಕ್ ಸೇರಿದಂತೆ ಎಲ್ಲಾ ತ್ಯಾಜ್ಯವನ್ನು ಆರಿಸಿ ತೆರವು ಮಾಡಲಾಯಿತು.