ಅಥಣಿ: ಭೂಸುಧಾರಣೆ ಕಾಯ್ದೆ, ಎಪಿಎಂಸಿ ಮತ್ತು ವಿದ್ಯುತ್ ಖಾಸಗೀಕರಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ಜಿಲ್ಲೆಯ ಹಲವಾರು ರೈತ ಸಂಘಟನೆಗಳು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು.
ರೈತ ಮುಖಂಡ ಹಾಗೂ ರಾಜ್ಯ ರೈತ ಸಂಘದ ಸಂಚಾಲಕ ಚುನ್ನಪ್ಪ ಪುಜಾರಿ ಮಾತನಾಡಿ, ಭೂಸುಧಾರಣೆ ಕಾಯ್ದೆ ರಾಜ್ಯ ಸರ್ಕಾರ ವಾಪಸ್ ಪಡೆದುಕೊಳ್ಳಬೇಕು. ನಾವು ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ಭೂಸುಧಾರಣೆ ಕಾಯ್ದೆ ಬೇಡ ಎಂದು ಮನವಿಕೊಡಲು ಬಂದಿದ್ದೇವೆ. ಆದರೆ ಪೊಲೀಸರು ಬಿಡುತ್ತಿಲ್ಲ. ರಾಜ್ಯದ ಉಪಮುಖ್ಯಮಂತ್ರಿ ಸವದಿ ಅವರಿಗೆ ಸಂಬಂಧಿಸಿದ ಒಬ್ಬರು ಅಧಿಕಾರಿಗಳು ನಮ್ಮ ಮನವಿಯನ್ನು ಆಲಿಸಲು ಘಟನಾ ಸ್ಥಳಕ್ಕೆ ಬಾರದೆ ಇರುವುದರಿಂದ ಹಲವಾರು ಅನುಮಾನಗಳು ಹುಟ್ಟಿವೆ ಎಂದರು.
ಭೂಸುಧಾರಣೆ ಕಾಯ್ದೆ ಕೈ ಬಿಡುವಂತೆ ನಾಳೆ ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರ ನಿವಾಸದ ಮುಂದೆ ಪ್ರತಿಭಟನೆ ಮಾಡುತ್ತೇವೆ. ಆಗಸ್ಟ್ 15 ರ ಸ್ವಾಂತಂತ್ರ್ಯ ದಿನದಂದು ರಾಜ್ಯ ವ್ಯಾಪ್ತಿಯಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.