ಬೆಳಗಾವಿ/ಬೆಂಗಳೂರು: ವಿಧಾನಮಂಡಲದ ಚಳಿಗಾಲ ಅಧಿವೇಶನ ಕುಂದಾನಗರಿ ಬೆಳಗಾವಿಯ ಸುವರ್ಣಸೌಧದಲ್ಲಿ ಸೋಮವಾರದಿಂದ ಆರಂಭವಾಗಲಿದ್ದು, ಅಧಿವೇಶನ ಸುಸೂತ್ರವಾಗಿ ನಡೆಯುವ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಸಿದ್ಧತೆಗಳನ್ನು ವಿಧಾನಸಭಾಧ್ಯಕ್ಷ ಯು ಟಿ ಖಾದರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪರಿಶೀಲನೆ ನಡೆಸಿದರು. ಸುವರ್ಣಸೌಧದಲ್ಲಿ ಕೈಗೊಂಡಿರುವ ಸಿದ್ಧತೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಅಗತ್ಯ ಸಲಹೆ ಸೂಚನೆಗಳನ್ನು ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ನೀಡಿದರು.
ಸುವರ್ಣಸೌಧದ ಪ್ರವೇಶದ್ವಾರಗಳಲ್ಲಿನ ಸಿದ್ಧತೆ, ವಿಧಾನಸಭಾ ಸದನ, ವಿಧಾನ ಪರಿಷತ್ ಸದನಗಳನ್ನು ವೀಕ್ಷಿಸಿದ ಅವರು ಮೈಕ್ ವ್ಯವಸ್ಥೆ ಸೇರಿ ಇನ್ನಿತರ ಅಂಶಗಳನ್ನು ಪರಿಶೀಲಿಸಿದರು. ಆಡಳಿತ ಪಕ್ಷದ ಮೊಗಸಾಲೆ, ವಿರೋಧ ಪಕ್ಷದ ಮೊಗಸಾಲೆ, ಸಭಾಧ್ಯಕ್ಷರ, ಸಭಾಪತಿಗಳ ಕೊಠಡಿ, ಮುಖ್ಯಮಂತ್ರಿಗಳ ಕೊಠಡಿ, ವಿರೋಧಪಕ್ಷದ ನಾಯಕರ ಕೊಠಡಿಯನ್ನು ಪರಿಶೀಲಿಸಿದರು. ಅಧಿವೇಶನ ಕರ್ತವ್ಯಕ್ಕೆ ಹಾಜರಾಗಿರುವ ಮಾರ್ಷಲ್ಗಳ ಕ್ಷೇಮ ವಿಚಾರಿಸಿದ ಸಭಾಧ್ಯಕ್ಷ ಯು.ಟಿ. ಖಾದರ್ ಹಾಗೂ ಸಭಾಪತಿ ಬಸವರಾಜ ಹೊರಟ್ಟಿ ಅವರು, ಎಲ್ಲಿ ತಂಗಿದ್ದೀರಿ, ಊಟ ಸರಿಯಾಗಿತ್ತೇ, ಏನಾದ್ರೂ ಸಮಸ್ಯೆ ಇದರೆ ಹೇಳಿ ಸರಿಪಡಿಸಲಾಗುವುದು ಎಂದು ತಿಳಿಸಿ, ತಮಗೆ ವಹಿಸಿದ ಕೆಲಸ ಅಚ್ಚುಕಟ್ಟಾಗಿ ಮಾಡಿ ಎಂದು ಸೂಚನೆ ನೀಡಿದರು.
ಶಾಸಕರಿಗೆ, ಮಾರ್ಷಲ್ಗಳಿಗೆ, ಅಧಿಕಾರಿಗಳಿಗೆ ಮತ್ತು ಮಾಧ್ಯಮದವರಿಗೆ ಕಲ್ಪಿಸಲಾಗಿರುವ ಊಟದ ಸಿದ್ಧತೆ ಪರಿಶೀಲಿಸಿದ ಸಭಾಧ್ಯಕ್ಷರು ಮತ್ತು ಸಭಾಪತಿಗಳು ಕೆಲ ಸಲಹೆಗಳನ್ನು ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಅವರಿಗೆ ನೀಡಿದರು. ನಂತರ ಪ್ರೇಕ್ಷಕರ ಗ್ಯಾಲರಿ, ವಿದ್ಯಾರ್ಥಿಗಳು ಕಲಾಪ ವೀಕ್ಷಿಸುವ ಮುಂಚೆ ಸಂವಿಧಾನದ ಮೌಲ್ಯಗಳು, ವಿಧಾನಮಂಡಲದ ಕಲಾಪಗಳ ಕುರಿತ ಸಾಕ್ಷ್ಯಚಿತ್ರ ಬಿತ್ತರಿಸುವ ಸಭಾಂಗಣದ ಸಿದ್ಧತೆಗಳನ್ನು ಪರಿಶೀಲಿಸಿದರು.
ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಧಿಗೆ ಕಲಾಪ ವೀಕ್ಷಿಸುವುದಕ್ಕೆ ಅವಕಾಶ ಮಾಡಿಕೊಡಿ ಎಂದು ಅಧಿಕಾರಿಗಳಿಗೆ ಸಭಾಧ್ಯಕ್ಷರು, ಸಭಾಪತಿಗಳು ನಿರ್ದೇಶನ ನೀಡಿದರು. ಸುವರ್ಣಸೌಧದ ಎಲ್ಲೆಡೆ ಸಂಚರಿಸಿ ಕೈಗೊಂಡಿರುವ ಸಿದ್ಧತೆಗಳನ್ನು ಪರಿಶೀಲಿಸಿ, ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ವಿಧಾನಸಭೆಯ ಕಾರ್ಯದರ್ಶಿ ವಿಶಾಲಾಕ್ಷಿ, ಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮಿ, ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಮತ್ತು ಇನ್ನಿತರ ಅಧಿಕಾರಿಗಳು ಇದ್ದರು.
ಇದನ್ನೂ ಓದಿ: ಅಧಿವೇಶನದಲ್ಲಿ ಜನರ ಹಿತದ ಬಗ್ಗೆ ಚಿಂತಿಸಿ, ಸದನ ಮುಂದೂಡಿಕೆಗೆ ಕಡಿವಾಣ ಹಾಕಿ: ಹೋರಾಟಗಾರರ ಆಗ್ರಹ
ಸಕಾಲಕ್ಕೆ ಕಲಾಪಕ್ಕೆ ಬರುವ ಸದಸ್ಯರಿಗೆ ಟೀ ಕಪ್ ಸಾಸರ್ ಗಿಫ್ಟ್: ಮತ್ತೊಂದೆಡೆ, ಸರಿಯಾದ ಸಮಯದಲ್ಲಿ ಕಲಾಪಕ್ಕೆ ಹಾಜರಾಗುವುದನ್ನು ಪ್ರೋತ್ಸಾಹಿಸಲು ಸದಸ್ಯರಿಗೆ ಟೀ ಕಪ್ ಸಾಸರ್ ಗಿಫ್ಟ್ ನೀಡಲು ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಅವರು ನಿರ್ಧರಿಸಿದ್ದಾರೆ. ಸುವರ್ಣಸೌಧದಲ್ಲಿ ಅಧಿವೇಶನದ ಪೂರ್ವಸಿದ್ಧತೆ ಪರಿಶೀಲಿಸಿ ಬಳಿಕ ಸಭಾಪತಿ ಬಸವರಾಜ ಹೊರಟ್ಟಿ ಜೊತೆ ಜಂಟಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ ಬಾರಿ ಕೋರಂಗೆ ಮುನ್ನ ಕಲಾಪಕ್ಕೆ ಬರುವ ಸದಸ್ಯರನ್ನು ಗುರುತಿಸುವ ಕೆಲಸ ಮಾಡಲಾಗುತ್ತದೆ. ಸಮಯಕ್ಕೆ ಮುನ್ನ ಕಲಾಪಕ್ಕೆ ಆಗಮಿಸುವ ಸದಸ್ಯರಿಗೆ ಈ ಬಾರಿ ಟೀ ಕಪ್ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.