ಚಿಕ್ಕೋಡಿ: ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯಸಿ.. ಅಂದ್ರೆ ಹೆತ್ತ ತಾಯಿ ಹೊತ್ತ ಭೂಮಿ ಸ್ವರ್ಗಕ್ಕಿಂತಲೂ ಶ್ರೇಷ್ಠ ಎಂಬುದು ತಾಯಿ ಕುರಿತು ಹೇಳುವ ಗೌರವದ ಮಾತು. ಅದೇ ರೀತಿ ಕುಟುಂಬದ ಒಡೆಯ ತಂದೆಗೂ ಕುಟುಂಬಗಳಲ್ಲಿ ಮಹತ್ತರವಾದ ಸ್ಥಾನ ಇರುತ್ತೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಕೆಲ ಮಕ್ಕಳು ತಂದೆ-ತಾಯಿಯರನ್ನು ಸಾಕಲು ಸಾಧ್ಯವಾಗದೆ ವೃದ್ಧಾಶ್ರಮಕ್ಕೆ ಕಳಿಸುವ ಘಟನೆಗಳು ಸುದ್ದಿಯಾಗುತ್ತವೆ. ಇಂತಹ ಕಾಲಘಟ್ಟದಲ್ಲಿ ಪುತ್ರನೋರ್ವ ಜನ್ಮ ನೀಡಿದ ಮಾತಾಪಿತರಿಗೆ ದೇವಸ್ಥಾನ ನಿರ್ಮಿಸಿ ದಿನನಿತ್ಯ ಪೂಜಿಸುತ್ತ, ಆರಾಧನೆ ಮಾಡುವ ಮೂಲಕ ಮಾದರಿಯಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸುಲ್ತಾನಪೂರ ಗ್ರಾಮದ ಸುರೇಶ ತಳವಾರ ಎಂಬುವರು ತಮ್ಮ ಜಮೀನಿನಲ್ಲಿ ಅಗಲಿದ ತಂದೆ ಗುರಪ್ಪ ತಳವಾರ ಹಾಗೂ ತಾಯಿ ಪಾರ್ವತಿ ತಳವಾರ ಅವರ ಸಮಾಧಿ ಮೇಲೆ ಪುತ್ಥಳಿ ಸ್ಥಾಪಿಸಿ, ದೇವಸ್ಥಾನ ನಿರ್ಮಿಸುವ ಮೂಲಕ ಹೆತ್ತವರ ಮೇಲಿನ ಪ್ರೀತಿ ಮತ್ತು ಗೌರವ ಮೆರೆದಿದ್ದಾರೆ. ಕಳೆದ 20 ವರ್ಷಗಳ ಹಿಂದೆ ಸುರೇಶ ತಳವಾರ ತಂದೆ ಸಾವನ್ನಪ್ಪಿದ್ದು, ಕಳೆದ ಎರಡು ವರ್ಷದ ಹಿಂದಷ್ಟೇ ಅವರ ತಾಯಿ ನಿಧನರಾಗಿದ್ದಾರೆ. ಪ್ರತಿ ವರ್ಷ ಅವರ ಪುಣ್ಯಸ್ಮರಣೆಯಂದು ಸಾವಿರಾರು ಜನರಿಗೆ ಅನ್ನ ಸಂತರ್ಪಣೆ ಮಾಡುತ್ತಿದ್ದಾರೆ. ಈ ವರ್ಷ ತಂದೆ, ತಾಯಿಗಳು ಸದಾ ನಮ್ಮೊಂದಿಗೆ ಇರಬೇಕು ಎಂಬ ಭಾವನೆಯೊಂದಿಗೆ ಅವರ ದೇವಸ್ಥಾನ ನಿರ್ಮಿಸಿದ್ದಾರೆ.
ಇದನ್ನೂ ಓದಿ: ಮಹಾರಾಜಗೋಪುರ ನಿರ್ಮಾಣ: ಶೃಂಗೇರಿಯಲ್ಲಿ ಮಹಾಕುಂಭಾಭಿಷೇಕ- ವಿಡಿಯೋ
ತಂದೆ-ತಾಯಿಗೆ ದೇವರಿಗಿಂತಲೂ ದೊಡ್ಡ ಸ್ಥಾನ.. ಈ ಕುರಿತು 'ಈಟಿವಿ ಭಾರತ'ದ ಜೊತೆ ಮಾತನಾಡಿದ ಸುರೇಶ್ ತಳವಾರ, 'ನಮ್ಮ ಕುಟುಂಬದಲ್ಲಿ ತಂದೆ-ತಾಯಿಗೆ ದೇವರಿಗಿಂತಲು ಹೆಚ್ಚಿನ ಸ್ಥಾನವನ್ನು ಕೊಟ್ಟಿದ್ದೇವೆ. ನಾವು ಯಾವುದೇ ಕೆಲಸಕ್ಕೆ ಹೋಗುವ ಮುಂಚೆ ಅಪ್ಪ, ಅಮ್ಮನ ಆಶೀರ್ವಾದ ಪಡೆದುಕೊಂಡು ಹೋಗುವ ಪದ್ಧತಿಯನ್ನು ಬೆಳೆಸಿಕೊಂಡು ಬಂದಿದ್ದೇವೆ. ಕಳೆದ ಎರಡು ವರ್ಷದ ಹಿಂದೆ ನಮ್ಮ ಅಮ್ಮ ತೀರಿಕೊಂಡರು. ಅವರ ಆಶೀರ್ವಾದಕ್ಕೆ ನಾವು ದೇವಸ್ಥಾನ ನಿರ್ಮಾಣ ಮಾಡಿದ್ದೇವೆ. ಅವರು ನಮ್ಮ ಜೊತೆಗೆ ಯಾವತ್ತೂ ಇರುತ್ತಾರೆ ಎಂಬ ಕಾರಣಕ್ಕೆ ಈ ದೇವಾಲಯ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: 2,000 ಜನರಿಗೆ ಉಚಿತ ತೀರ್ಥ ಪ್ರವಾಸ ಒದಗಿಸಿದ ರಾಜಾಜಿನಗರದ ಕಾಂಗ್ರೆಸ್ ಮುಖಂಡ
ತಂದೆ-ತಾಯಿಯನ್ನು ಕಡೆಗಣಸಬೇಡಿ ತಂದೆ-ತಾಯಿ ದೇವರಿಗಿಂತಲೂ ಹೆಚ್ಚು, ಅವರನ್ನು ಪ್ರೀತಿಯಿಂದ ನೋಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಅವರು ನಮ್ಮ ಜೊತೆ ಇದ್ದರೂ, ಇಲ್ಲದ್ದಿದ್ದರೂ ಸಹ ಸದಾ ನಮ್ಮ ಮೇಲೆ ಅವರ ಆದರ್ಶ ಮತ್ತು ಮಾರ್ಗದರ್ಶನ ಇರಬೇಕು ಎಂಬ ದೃಷ್ಟಿಯಿಂದ ಅವರ ದೇವಸ್ಥಾನ ನಿರ್ಮಿಸಿದ್ದೇವೆ. ನಾವಿಂದು ಏನಾದರು ಸಾಧಿಸಿದ್ದರೆ ಅದಕ್ಕೆ ಅವರ ಉತ್ತಮ ಮಾರ್ಗದರ್ಶನ ಹಾಗೂ ಆಶೀರ್ವಾದ ಕಾರಣ. ಎಷ್ಟು ಜನ್ಮ ಎತ್ತಿದರು ಹೆತ್ತವರ ಋಣ ತೀರಿಸಲಾಗದು, ಯಾವ ಮಕ್ಕಳು ತಂದೆ ತಾಯಿಯರನ್ನು ಕಡೆಗಣಿಸಬೇಡಿ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಕೊಡಗಿನಲ್ಲಿ 800 ವರ್ಷದ ಪುರಾತನ ಶಿವ ದೇವಾಲಯ ಪತ್ತೆ.. ಜೀರ್ಣೋದ್ಧಾರಕ್ಕೆ ಗ್ರಾಮಸ್ಥರ ನಿರ್ಧಾರ