ಬೆಳಗಾವಿ: ರಾಜ್ಯದಲ್ಲಿ ಹಿಜಾಬ್ - ಕೇಸರಿ ಶಾಲು ಸಂಘರ್ಷ ತಾರಕಕ್ಕೇರುತ್ತಿರುವ ಮಧ್ಯೆಯೇ ಬೆಳಗಾವಿಯಲ್ಲಿ ಹಿಂದೂ ವಿದ್ಯಾರ್ಥಿಗಳು ಪ್ರಚೋದನೆಗೆ ಕೆಲ ಕಿಡಿಗೇಡಿಗಳು ಯತ್ನಿಸುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ.
ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುವ ಮೂಲಕ ಹಿಂದೂ ವಿದ್ಯಾರ್ಥಿಗಳನ್ನು ಪ್ರಚೋದಿಸುವ ಯತ್ನ ಮಾಡುತ್ತಿದ್ದಾರೆ. ಹಿಜಾಬ್ ವಿರುದ್ಧ ಶಿವಮೊಗ್ಗ ಕುಂದಾಪುರದಲ್ಲಿ ಹಿಂದೂ ಯುವಕರ ರೌದ್ರರೂಪ ಕಾಣ ಸಿಗುತ್ತಿದೆ. ಆದರೆ ಬೆಳಗಾವಿಯಲ್ಲಿ ಏಕಿಲ್ಲ? ಎಂದು ಮರಾಠಿ ಭಾಷೆಯಲ್ಲಿ ಬರೆದ ಪೋಸ್ಟರ್ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗುತ್ತಿದೆ.
ಇದನ್ನೂ ಓದಿ: 'ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಥ ವಿಷಯಗಳು ಮೊದಲು ಚರ್ಚೆಯಾಗಿ, ನಂತರ ಸ್ಥಳೀಯ ಮಟ್ಟಕ್ಕೆ ಬರುತ್ತವೆ'
ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ವೈರಲ್ ಆಗುತ್ತಿದ್ದಂತೆ ಪೊಲೀಸರು ಅಲರ್ಟ್ ಆಗಿದ್ದಾರೆ. ಹಿಂದೂ-ಮುಸ್ಲಿಂ ಪರ ಸಂಘಟನೆಗಳ ಮುಖಂಡರನ್ನು ಕರೆಯಿಸಿ ಪೊಲೀಸರು ವಾರ್ನ್ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಪ್ರಚೋದನೆ ಮಾಡುವ ಕೆಲಸದಲ್ಲಿ ತೊಡಗಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೇಜುಗಳ ಬಳಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಬೆಳಗಾವಿ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಮಫ್ತಿಯಲ್ಲಿ ಪೊಲೀಸರು ರೌಂಡ್ಸ್ ಹಾಕುತ್ತಿದ್ದಾರೆ.