ಚಿಕ್ಕೋಡಿ: ದೇಶ ಕಾಯೋ ಯೋಧನಿಗೆ ಇಡೀ ರಾಷ್ಟ್ರವೇ ಕುಟುಂಬ. ಹೀಗಾಗಿಯೇ ನಿವೃತ್ತ ಯೋಧರಾದ ತಮ್ಮ ತಂದೆಯ ಆರೋಗ್ಯ ಸರಿ ಇಲ್ಲದ ಕಾರಣ ಅವರನ್ನು ನೋಡಲು ಯೋಧ ಸಹೋದರರು ಗ್ರಾಮಕ್ಕೆ ಬರುತ್ತಿರುವಾಗ ಸೈನ್ಯದಿಂದ ಕರೆ ಬಂದಿದ್ದಕ್ಕೆ ಸೇವೆಗೆ ಮರಳಿದ್ದಾರೆ.
ದೇಶದಲ್ಲಿ ಯುದ್ಧೋನ್ಮಾನದ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆ ರಜೆಗಾಗಿ ತಮ್ಮ ತವರಿಗೆ ಬಂದಿದ್ದ ಯೋಧರಿಬ್ಬರು ಸೇವೆ ಮಾಡಲು ಮರಳಿ ತೆರಳುತ್ತಿದ್ದಾರೆ. ಅಥಣಿ ತಾಲೂಕಿನ ಕಿರಣಗಿ ಗ್ರಾಮದ ಸಹೋದರರು ತಂದೆಯ ಅನಾರೋಗ್ಯದಲ್ಲೂ ದೇಶದ ರಕ್ಷಣೆಗೆ ತೆರಳಿದ್ದಾರೆ.
ಸದಾಶಿವ ಲೋಹಾರೆ ಅವರಿಗೆ ಒಟ್ಟು ಮೂವರು ಮಕ್ಕಳು. ಅದರಲ್ಲಿ ಹಿರಿಯ ಮಗ ತಂದೆ- ತಾಯಿಯನ್ನು ನೋಡಿಕೊಳ್ಳಲು ಜೊತೆಯಲ್ಲಿದ್ದರೆ. ಇನ್ನಿಬ್ಬರು ಮಕ್ಕಳು ಭಾರತಾಂಬೆಯ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಸದಾಶಿವ ಅವರ ದ್ವಿತೀಯ ಮಗ ಸಂತೋಷ ಲೂಹಾರ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದರೆ, ತೃತೀಯ ಪುತ್ರ ಪಠಾಣ ಕೋಟ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ತಂದೆ ಸದಾಶಿವ ಅವರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಆದ ಹಿನ್ನಲೆಯಲ್ಲಿ ಹಾಗೂ ಆರೋಗ್ಯ ಸರಿ ಇಲ್ಲದ ಕಾರಣ ಅವರನ್ನು ನೋಡಲು ಕಳೆದ ತಿಂಗಳು ಫೆ. 26 ರಂದು ಅಥಣಿ ತಾಲೂಕಿನ ಕಿರಣಗಿ ಗ್ರಾಮಕ್ಕೆ ಆಗಮಿಸುತ್ತಿದ್ದರು. ದ್ವಿತೀಯ ಪುತ್ರ ಸಂತೋಷ ಲೋಹಾರೆ ಅವರು ಜಮ್ಮು ಮತ್ತು ಕಾಶ್ಮೀರದಿಂದ ಮಹಾರಾಷ್ಟ್ರದ ಪುಣೆಗೆ ಬಂದಿದ್ದರು. ಆಗ ಹೆಡ್ ಕ್ವಾರ್ಟರ್ಸ್ನಿಂದ ಮರಳಿ ಸೈನ್ಯಕ್ಕೆ ಬರುವಂತೆ ಕರೆ ಬಂದಾಗ ಪುಣೆಯಿಂದ ಮತ್ತೆ ಜಮ್ಮು ಕಾಶ್ಮೀರಕ್ಕೆ ತೆರಳಿದ್ದಾರೆ.
ಇನ್ನು ತೃತೀಯ ಪುತ್ರ ಅಶೋಕಕ್ ಲೋಹಾರ ಅವರು ಸಹ ತಂದೆ-ತಾಯಿಯನ್ನು ನೋಡಲು ರಜೆ ಹಾಕಿ ಪಠಾಣ್ ಕೋಟ್ನಿಂದ ಮಹಾರಾಷ್ಟ್ರದ ಮೀರಜ್ಗೆ ಬಂದು ತಲುಪಿದ್ದರು. ಅವರಿಗೂ ಸೇನೆಯ ಪ್ರಧಾನ ಕಾರ್ಯಾಲಯದಿಂದ ಮರಳಿ ಸೈನ್ಯಕ್ಕೆ ಬರಬೇಕು ಎಂದು ಕರೆ ಬಂದಾಗ ಅವರು ಸಹಿತ ಪಠಾಣ ಕೋಟ್ಗೆ ಹಿಂದಿರುಗಿದ್ದಾರೆ.
ಈ ಕುರಿತು ಸದಾಶಿವ ಲೋಹಾರೆ ಪ್ರತಿಕ್ರಿಯಿಸಿದ್ದು, ನನ್ನ ಎರಡು ಮಕ್ಕಳು ಯುದ್ಧ ಮಾಡಿಕೊಂಡು ನಮ್ಮ ದೇಶಕ್ಕಾಗಿ ಹೋರಾಡಿ ವಿಜಯಶಾಲಿಗಳಾಗಿ ಬರುತ್ತಾರೆ. ನಾನು ಸೈನ್ಯದಲ್ಲಿ ಸೇವೆ ಸಲ್ಲಿಸಬೇಕಾದರೆ 1935 ಹಾಗೂ 1971ರ ಯುದ್ಧದಲ್ಲಿ ಭಾಗಿಯಾಗಿದ್ದೆ. ನನ್ನ ಮಕ್ಕಳು ಸೈನ್ಯದಲ್ಲಿದ್ದಾರೆ ಎಂದು ನಾನು ಎದೆ ತಟ್ಟಿ ಹೇಳುತ್ತೇನೆ. ನನ್ನ ಜನ್ಮ ಪಾವನವಾಗಿದೆ ಎಂದು ತಮ್ಮ ಆರೋಗ್ಯ ಸಮಸ್ಯೆಲ್ಲೂ ದೇಶಪ್ರೇಮ ಮೆರೆದಿದ್ದಾರೆ.